ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಶಿವಶಂಕರ ಒತ್ತಾಯ

ರಾಯಚೂರು, ನ.೧೩- ಸರಕಾರದಲ್ಲಿ ಖಾಲಿ ಇರುವ ೨ ಲಕ್ಷ ೫೦ ಸಾವಿರ ಹುದ್ದೆಗಳನ್ನು ಅದೇ ರೀತಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ. ಎಸ್.ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಒತ್ತಾಯಿಸಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಸ್.ಸಿ ಎಸ್.ಟಿ ನೌಕರರು ನೌಕರಿ ಮಾಡುವ ಸ್ಥಳಗಳಲ್ಲಿ ಇನ್ನೂ ಮುಕ್ತವಾಗಿ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣವಾಗಿಲ್ಲ.ಎಸ್.ಸಿ.ಎಸ್.ಟಿ ನೌಕರರ ಬಡ್ತಿ ವಿಚಾರದಲ್ಲಿ ಸರಕಾರವು ಮೀನ ಮೇಷ ಎಣಿಸುತ್ತಿರುವಂತೆ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.  ಸರಕಾರ ಮೀಸಲಾತಿಯನ್ನು ೧೭-೭ ಕ್ಕೆ ಏರಿಸಿದ್ದರೂ ಈಗ ನೇಮಕಾತಿ ಆದೇಶ ಮಾಡಿರುವುದರಲ್ಲಿ ಹಳೆಐ ೧೫-೩ ರ ನಿಯಮವನ್ನೇ ಪಾಲಿಸಲು ಮುಂದಾಗಿರುವುದು ಸರಕಾರದ ನಡೆ ಗೊಂದಲಕಾರಿಯಾಗಿದೆ. ಈಗಿನ ಮೀಸಲಾತಿ ಅಡಿಯಲ್ಲಿ ನೇಮಕಾತಿ ಹಾಗೂ ಬಡ್ತಿ ನೀಡಬೇಕು.೧೭-೭ ಮೀಸಲಾತಿ ಜಾರಿಯಾಗಬೇಕು.ಇಲ್ಲವೇ ಜಾರಿಯಾಗುವವರೆಗೂ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆಗಳನ್ನು ಮುಂದೂಡಬೇಕು. ಕೋರಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷ ಗತಿಸಿದರೂ ಸಾಮಾಜಿಕ ಪರಿಸ್ಥಿತಿ ಸುಧಾರಿಸಿಲ್ಲ.ಜಾತಿ ವ್ಯವಸ್ಥೆ ಹೋಗಿ ಪ್ರೀತಿ ವ್ಯವಸ್ಥೆ ಬರಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಎಸ್.ಸಿ. ಎಸ್.ಟಿ ಸಮುದಾಯಗಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ ಎಂದರು.