ಬ್ಯಾಕ್ ಟು ಬ್ಯಾಕ್ ಐ.ಟಿ.ಎಫ್ ಟೈಟಲ್‍ನತ್ತ ರಾಮ್‍ಕುಮಾರ್;ಅಲ್ಟ್ರಾಟೆಕ್ ಸಿಮೆಂಟ್ ಐಟಿಎಫ್ ಕಲಬುರಗಿ ಓಪನ್‍ನಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದ ಜಪಾನ್ ಜೋಡಿ

ಕಲಬುರಗಿ:ಡಿ.02: ಭಾರತದ ರಾಮ್‍ಕುಮಾರ್ ರಾಮನಾಥನ್ ಅವರು ಜಪಾನಿನ ರೊಟಾರೋ ತಗುಚಿ ವಿರುದ್ಧ ಭರ್ಜರಿ ಜಯದೊಂದಿಗೆ ಅಲ್ಟ್ರಾಟೆಕ್ ಸಿಮೆಂಟ್ ಐಟಿಎಫ್ ಕಲಬುರಗಿ ಓಪನ್‍ನ ಫೈನಲ್‍ಗೆ ತಲುಪುವ ಮೂಲಕ ಬ್ಯಾಕ್ ಟು ಬ್ಯಾಕ್ ಐಟಿಎಫ್ ಟೈಟಲ್ ಮುಡಿಗೇರಿಸಲು ದಾಪುಗಾಲು ಇಟ್ಟಿದ್ದಾರೆ. ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಅಂಗಳದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 65 ನಿಮಿಷಗಳಲ್ಲಿ ಸಂದರ್ಶಕ ಆಟಗಾರನ ಸವಾಲನ್ನು ಬದಿಗೊತ್ತಿ 6-2, 6-1 ಅಂತರದಲ್ಲಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದ್ದರು.
ಸಿಂಗಲ್ಸ್ ಪ್ರಶಸ್ತಿ ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಭಾರತೀಯ ಆಟಗಾರ ಏಳನೇ ಶ್ರೇಯಾಂಕದ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಅವರನ್ನು ಭಾನುವಾರ ಎದುರಿಸಲಿದ್ದಾರೆ. ಇನ್ನೊಂದು ಉಪಾಂತ್ಯ ಪಂದ್ಯದಲ್ಲಿ ಜಪಾನಿನ ಎರಡನೇ ಶ್ರೇಯಾಂಕದ ಮತ್ಸುದಾ ರ್ಯೂಕಿ ವಿರುದ್ಧ 6-2, 6-4 ಅಂತರದಲ್ಲಿ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಜಯ ಸಾಧಿಸಿದರು.
ಡಬಲ್ಸ್ ಪ್ರಶಸ್ತಿಗೆ ಮುತ್ತಿಟ್ಟ ಜಪಾನ್ ಜೋಡಿ: ಡಬಲ್ಸ್ ಫೈನಲ್ ಪಂದ್ಯದಲ್ಲಿ ಜಪಾನಿನ ರ್ಯೂಕಿ ಮತ್ತು ತಗುಚಿ ಜೋಡಿ ಡಬಲ್ಸ್ ಕಿರೀಟವನ್ನು ಎತ್ತಿ ಹಿಡಿದರು. ಜಪಾನ್ ಜೋಡಿಯು ಇಂಡೋ-ಆಸ್ಟ್ರಿಯನ್ ಜೋಡಿಯಾದ ನಿತಿನ್ ಕುಮಾರ್ ಸಿನ್ಹಾ ಮತ್ತು ಡೇವಿಡ್ ಪಿಚ್ಲರ್ ವಿರುದ್ಧ 6-4, 2-6, 10-7 ರಲ್ಲಿ ಮೇಲುಗೈ ಸಾಧಿಸಿ 1550 ಯು.ಎಸ್. ಡಾಲರ್ ಜೊತೆಗೆ ತಲಾ 25 ಎ.ಟಿ.ಪಿ ಪಾಯಿಂಟ್‍ಗಳನ್ನು ಪಡೆದರು. ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟ ಇಂಡೋ-ಆಸ್ಟ್ರಿಯನ್ ಜೋಡಿ ಯು.ಎಸ್. 900 ಡಾಲರ್ ಮತ್ತು ತಲಾ 16 ಎ.ಟಿ.ಪಿ ಪಾಯಿಂಟ್ ಗಳಿಸಿದರು.
ನಂತರ ಅಂಕಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಸ್ರೋ ಸಂಸ್ಥೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಮಹೇಶ್ವರ ರಾವ್, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಆರ್.ಚೇತನ ಕುಮಾರ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಪೆÇ್ರಬೇಷನರ್ ಐ.ಎ.ಎಸ್.ಅಧಿಕಾರಿ ಗಜಾನನ್ ಬಾಳಿ, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಗೌರವ ಜಂಟಿ ಕಾರ್ಯದರ್ಶಿ ಸುನೀಲ ಯಜಮಾನಾ, ಐ.ಟಿ.ಎಫ್ ಸೂಪರ್‍ವೈಸರ್ ಧಾರಕಾ ಎಲ್ಲವಾಲಾ, ಟೂರ್ನಿ ನಿರ್ದೇಶಕ ಪೀಟರ್ ವಿಜಯಕುಮಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಅವರು ಡಬಲ್ಸ್ ವಿನ್ನರ್ಸ್ ಮತ್ತು ರನ್ನರ್ಸ್‍ಗಳಿಗೆ ಚೆಕ್, ಟ್ರೋಫಿ ಪ್ರದಾನ ಮಾಡಿದರು.
ಕಳೆದ ವಾರ ಐಟಿಎಫ್ ಮುಂಬೈ ಓಪನ್ ಟೈಟಲ್ ಗೆದ್ದಿರುವ ರಾಮ್‍ಕುಮಾರ್ ಮತ್ತೆ ಪ್ರಶಸ್ತಿಯತ್ತ ಕಣ್ಣಿಟ್ಟಿದ್ದಾರೆ. ಮೊದಲ ಐದು ಗೇಮ್‍ಗಳು ಸರ್ವ್‍ನೊಂದಿಗೆ ಸಾಗಿದವು. ಆರನೇ ಗೇಮ್‍ನಲ್ಲಿ ಜಪಾನಿನ ಆಟಗಾರ ಸರ್ವ್ ಕಳೆದುಕೊಂಡರು. ಇದು 29 ವರ್ಷದ ಭಾರತೀಯ ಆಟಗಾರನ ಆತ್ಮವಿಶ್ವಾಸ ಹೆಚ್ಚಿಸಿತು. ದೊಡ್ಡ ಸರ್ವ್‍ನೊಂದಿಗೆ 7ನೇ ಗೇಮ್ ಗೆದ್ದಿದಲ್ಲದೆ ಎಂಟನೇ ಗೇಮ್‍ನಲ್ಲಿ ಸುದೀರ್ಘ ಹೋರಾಟದ ನಂತರ ರೊಟಾರೋ ತಗುಚಿ ಅವರ ಸರ್ವ್ ಬ್ರೆಕ್ ಮಾಡಿ 6-2 ರಿಂದ ಮೊದಲ ಸೆಟ್ ವಶಪಡಿಸಿಕೊಂಡರು.
ಭಾರತೀಯ ಡೇವಿಸ್ ಕಪ್ ತಂಡದ ಸದಸ್ಯ ಮತ್ತು ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ರಾಮನಾಥನ್ ಎರಡನೇ ಸೆಟ್‍ನಲ್ಲಿ ಇನ್ನಷ್ಟು ಉತ್ತಮವಾದ ಪ್ರದರ್ಶನ ತೋರಿದರು. ಅಂಗಳದಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಜಪಾನಿ ಆಟಗಾರ ಎರಡನೇ ಗೇಮ್‍ನಲ್ಲಿ ಸರ್ವ್ ಉಳಿಸಿಕೊಳ್ಳಲು ಯಶಕಂಡರಾದರು ರಾಮ್‍ಕುಮಾರ್ ಅವರಿಂದ ಪ್ರಭಾವಶಾಲಿ ಪ್ರದರ್ಶನ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದು ವಾರಾಂತ್ಯದ ಪ್ರೇಕ್ಷಕರನ್ನು ಪಂದ್ಯದಲ್ಲಿ ಉನ್ಮಾದದಲ್ಲಿರಿಸಿತ್ತು. ತಗೂಚಿ ಅವರ 4 ಮತ್ತು 6ನೇ ಗೇಮ್ ಬ್ರೆಕ್ ಮಾಡಿ ಅಂತಿಮವಾಗಿ ರಾಮಕುಮಾರ್ ಅವರು ಎರಡನೇ ಸೆಟ್ 6-1 ಗೆದ್ದು ನಗೆ ಬೀರಿದರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ, ಪಿಚ್ಲರ್ ಮೊದಲ ಮತ್ತು ಮೂರನೇ ಗೇಮ್‍ಗಳಲ್ಲಿ ಸರ್ವಿಸ್ ಬ್ರೆಕ್ ಗೆದ್ದು 4-0 ಲೀಡ್ ತೆಗೆದುಕೊಂಡರು. ಮೊದಲನೇ ಸೆಟ್ನಲ್ಲಿ ಆಸ್ಟ್ರಿಯನ್ ಆಟಗಾರ 6-2 ರಿಂದ ಗೆದ್ದರು ಸಹ ಸೆಟ್‍ನ ಉಳಿದ ಭಾಗಗಳಲ್ಲಿ ಉಭಯ ಎದುರಾಳಿಗಳು ತಮ್ಮ ಸರ್ವ್‍ಗಳನ್ನು ಹಿಡಿದಿಟ್ಟುಕೊಂಡರು. ಎರಡನೇ ಸೆಟ್‍ನಲ್ಲಿ ಅಲ್ಪಾವಧಿಯ ಫಾರ್ಮ್‍ಗೆ ಮರಳಿದ ಮತ್ಸುಡಾ ರ್ಯೂಕಿ ಮೂರನೇ ಗೇಮ್‍ನಲ್ಲಿ ತನ್ನ ಸರ್ವ್ ಕಳೆದುಕೊಂಡರು. ನಂತರ ಗೇಮ್‍ನಲ್ಲಿ ಲೆವೆಲ್‍ಗೆ ಹಿಂತಿರುಗಿದರಾದರು ಏಳನೇ ಗೇಮ್ ಬ್ರೆಕ್ ಸಾಧಿಸಿದ ಪಿಚ್ಲರ್ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಅಂತಿಮವಾಗಿ 6-4 ರಲ್ಲಿ ಸೆಟ್ ಗೆದ್ದು ಫೈನಲ್‍ಗೆ ಎಂಟ್ರಿ ಕೊಟ್ಟರು.
ಪುರುಷರ ಸಿಂಗಲ್ಸ್ (ಸೆಮಿಫೈನಲ್ ಫಲಿತಾಂಶಗಳು): 5-ಭಾರತದ ರಾಮ್‍ಕುಮಾರ್ ರಾಮನಾಥನ್ ಅವರು ಜಪಾನಿನ ರೊಟಾರೊ ತಗುಚಿ ಅವರನ್ನು 6-2, 6-1; 7-ಡೇವಿಡ್ ಪಿಚ್ಲರ್ (ಆಸ್ಟ್ರಿಯಾ) ಅವರು ಜಪಾನಿನ 2-ಮಟ್ಸುದಾ ರ್ಯೂಕಿ ಅವರನ್ನು 6-2, 6-4 ಅಂತರದಿಂದ ಸೋಲಿಸಿದರು.
ಡಬಲ್ಸ್ (ಅಂತಿಮ ಫಲಿತಾಂಶ): ಜಪಾನಿನ ರ್ಯೂಕಿ ಮತ್ಸುದಾ ಮತ್ತು ರೊಟಾರೊ ತಗುಚಿ ಅವರು 2-ಡೇವಿಡ್ ಪಿಚ್ಲರ್ (ಆಸ್ಟ್ರಿಯಾ) ಮತ್ತು ನಿತಿನ್ ಕುಮಾರ್ ಸಿನ್ಹಾ (ಭಾರತ) ವಿರುದ್ಧ 6-4, 2-6, 10-7 ಅಂತರದಿಂದ ಗೆದ್ದರು.
ಭಾನುವಾರ ಸಿಂಗಲ್ಸ್ ಫೈನಲ್ ಪಂದ್ಯ: ಭಾರತದ 5-ರಾಮ್‍ಕುಮಾರ್ ರಾಮನಾಥನ್ ಅವರು 7-ಡೇವಿಡ್ ಪಿಚ್ಲರ್ (ಆಸ್ಟರಿಯಾ) ಅವರೊಂದಿಗೆ ಭಾನುವಾರ 9.30 ಗಂಟೆಗೆ ಮೊದಲನೇ ಅಂಕಣದಲ್ಲಿ ಕಲಬುರಗಿ ಓಪನ್ ಸಿಂಗಲ್ಸ್ ಟೈಟಲ್‍ಗೆ ಸೆಣಸಾಡಲಿದ್ದಾರೆ.

————
ಟೂರ್ನಿ ಉತ್ತಮವಾಗಿ ಸಂಘಟಿಸಲಾಗಿದೆ. ಪಂದ್ಯದಲ್ಲಿ ಗೆಲವು ಸಾಧಿಸಲಾಗಿಲ್ಲ. ಎದುರಾಳಿಗಳು ತುಂಬಾ ಚೆನ್ನಾಗಿ ಆಡಿದ್ದರು. ಭಾನುವಾರ ಸಿಂಗಲ್ಸ್ ಪೈನಲ್ ಇದ್ದು, ಗೆಲ್ಲಲು ಪ್ರಯತ್ನಿಸುವೆ. ಥ್ಯಾಂಕ್ಯೂ ಕಲಬುರಗಿ !
-ಡೇವಿಡ್ ಪಿಚ್ಲರ್, ಅಸ್ಟ್ರಿಯಾ ಅಟಗಾರ

——————–
ಗೆಲುವು ಸಾಧಿಸಿದ ಜಪಾನಿ ಜೋಡಿಗೆ ಧನ್ಯವಾದ. ಕರ್ನಾಟಕ ಇನ್ನು ಹೆಚ್ಚಿನ ಅಂತರಾಷ್ಟ್ರಿಯ ಟೂರ್ನಿ ಆಯೋಜಿಸಲಿ. ಇಲ್ಲಿನ ಪ್ರೇಕ್ಷಕರ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ
-ನಿತೀನ್ ಕುಮಾರ ಸಿನ್ಹಾ, ಭಾರತೀಯ ಆಟಗಾರ