ಬ್ಯಾಂಡ್‌ಸೆಟ್‌ಗೆ ಕಿವಿಗೊಡದಿರಿ ಸಿಎಂಗೆ ರಮೇಶ್ ಕಿವಿಮಾತು

ಬೆಂಗಳೂರು, ಮಾ. ೧೯- ಅಧಿಕಾರ ಶಾಶ್ವತವಲ್ಲ. ಅಧಿಕಾರ ಇರುವಷ್ಟು ದಿನ ಅಂತಃಕರಣದಿಂದ ಆಡಳಿತ ಮಾಡಿ. ಕುಟುಂಬ ವ್ಯಾಮೋಹ ಬೇಡ. ಅದು ನಿಮ್ಮ ಬಲಿ ತೆಗೆದುಕೊಳ್ಳಬಾರದು. ನಿಮ್ಮ ಸುತ್ತ ಇರುವ ಬ್ಯಾಂಡ್‌ಸೆಟ್ ಬಗ್ಗೆ ಹುಷಾರಾಗಿರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಾಂಗ್ರೆಸ್‌ನ ರಮೇಶ್‌ಕುಮಾರ್ ವಿಧಾನಸಭೆಯಲ್ಲಿಂದು ಕಿವಿ ಮಾತು ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್‌ಕುಮಾರ್ ಅವರು, ಅಂತಃಕರಣ ಇರುವ ಸರ್ಕಾರ ಇದಾಗಬೇಕು.ಜ ನಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿ ಎಂದು ಯಡಿಯೂರಪ್ಪನವರಿಗೆ ಸಲಹೆ ಮಾಡಿ, ನನಗೆ ನಿಮ್ಮ ಬಗ್ಗೆ ಅಭಿಮಾನ, ಗೌರವ ಇದೆ. ಈ ಹಿಂದೆ ನಿಮ್ಮ ಬಗ್ಗೆ ಯಾವ ನಿಲುವು ಹೊಂದಿದ್ದೇನೋ ಅದೇ ನಿಲುವು, ಅಭಿಮಾನ ಈಗಲೂ ಇದೆ. ನಿಮ್ಮ ದಿ. ಶ್ರೀಮತಿಯವರು ನಮ್ಮ ಕುಟುಂಬದವರಿಗೂ ಬಹಳ ಒಡನಾಟವಿತ್ತು ಎಂಬುದನ್ನು ಯಡಿಯೂರಪ್ಪನವರಿಗೆ ನೆನಪು ಮಾಡಿದರು.
ಆದರೆ ಇಂದು ನಿಮ್ಮ ಕುಟುಂಬ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಕುಟುಂಬದ ವ್ಯಾಮೋಹ ನಿಮ್ಮನ್ನು ಬಲಿ ಪಡೆಯಬಾರದು. ಹೀಗಾಗಿ ಕುಟುಂಬ ಆಡಳಿತದಿಂದ ದೂರವಿಡಿ. ಏಕೆಂದರೆ ನೀವು ಸಾರ್ವಜನಿಕ ಆಸ್ತಿ ಎಂದರು.
ಕುಟುಂಬದ ಮೇಲೆ ವ್ಯಾಮೋಹ ಇರಬೇಕು ನಿಜ. ಆ ವ್ಯಾಮೋಹ ನಮ್ಮನ್ನೇ ಬಲಿ ತೆಗೆದುಕೊಳ್ಳಬಾರದು. ಎಚ್ಚರವಹಿಸಿ ಆಡಳಿತದಲ್ಲಿ ಕುಟುಂಬ ಮೂಗುತೂರಿಸದಂತೆ ನೋಡಿಕೊಳ್ಳಿ ಎಂದು ಯಡಿಯೂರಪ್ಪನವರಿಗೆ ಹೇಳಿದರು.
ಅಧಿಕಾರ ಶಾಶ್ವತ ಅಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜಕೀಯ ನಾಯಕರ ಸುತ್ತ ಕೆಲವರು ಸೇರಿಕೊಳ್ಳುತ್ತಾರೆ. ಇವರನ್ನು ಬ್ಯಾಂಡ್‌ಸೆಟ್ ಎಂದು ಕರೆಯುತ್ತಾರೆ. ಸಿದ್ಧರಾಮಯ್ಯ ಇದ್ದಾಗಲೂ ಈ ಬ್ಯಾಂಡ್‌ಸೆಟ್ ಇತ್ತು. ಈ ಬಗ್ಗೆ ನಾನು ಹೇಳಿ ನಿಷ್ಠೂರನಾಗಿದ್ದೆ ಎಂದರು.
ಈ ಬ್ಯಾಂಡ್‌ಸೆಟ್‌ನವರು ನಾಯಕರ ಕಣ್ಣು ಕಾಣದಂತೆ, ಕಿವಿ ಕೇಳದಂತೆ ಮಾಡುತ್ತಾರೆ. ಅಧಿಕಾರದ ಅಮಲು ಏರುವಂತೆ ನೋಡಿಕೊಳ್ಳುತ್ತಾರೆ. ಈ ಬ್ಯಾಂಡ್‌ಸೆಟ್‌ನವರಿಗೆ ಹಲವು ನಾಯಕರು ಬಲಿಯಾಗಿದ್ದಾರೆ. ನೀವು ಹುಷಾರಾಗಿರಿ ಎಂದು ಯಡಿಯೂರಪ್ಪನವರಿಗೆ ಹೇಳಿದರು.
ನಿಮ್ಮ ಜತೆಯೂ ಈಗ ಬ್ಯಾಂಡ್‌ಸೆಟ್ ಇದೆ. ಆ ಬಗ್ಗೆ ಎಚ್ಚರ ವಹಿಸಿ. ನೀವು ಶಿಕಾರಿಪುರದಿಂದ ಹೋರಾಟ ಮಾಡಿಕೊಂಡು ಎತ್ತರದ ಸ್ಥಾನಕ್ಕೆ ಬಂದಿದ್ದೀರೀ, ಜನಪರ ಸರ್ಕಾರ ನೀಡಿ ಎಂದರು.
ಆಡಳಿತಗಾರರಿಗೆ ಪಂಚೇಂದ್ರೀಯಗಳು ಸರಿ ಇರಬೇಕು. ಕಣ್ಣು, ಕಿವಿ ತೆರೆದುಕೊಂಡು ಜನರ ಸಮಸ್ಯೆಗಳನ್ನು ಆಲಿಸಿ, ಕಣ್ಣಿಗೆ ಪೊರೆ ಬಂದಂತೆ ನಡೆದುಕೊಳ್ಳುವುದು ಬೇಡ ಎಂದು ರಮೇಶ್‌ಕುಮಾರ್ ಅವರು, ಇದಕ್ಕೆ ರಾಜರ ಕಥೆ ಹೇಳಿ, ರಾಜ ಕಿರೀಟ ಹಾಕಿಕೊಂಡು ಮಂತ್ರಿಗೆ ಪ್ರಶ್ನೆ ಮಾಡುತ್ತಾನೆ. ಮಂತ್ರಿ ಹೇಳಿದ್ದನ್ನೆ ರಾಜ ಕೇಳುತ್ತಾನೆ. ಆದರೆ ಇದು ಪ್ರಜಾಪ್ರಭುತ್ವ. ಇಲ್ಲಿ ಎಲ್ಲ ಇಂದ್ರೀಯಗಳು ಆಕ್ಟಿವ್ ಆಗಿರಬೇಕು. ಜನರ ಸಂಕಷ್ಟ ಆಲಿಸುವವರಾಗಿರಬೇಕು. ಹೀಗೆ ಸರ್ಕಾರದ ಆಡಳಿತ ಇರಬೇಕು ಎಂದು ರಮೇಶ್‌ಕುಮಾರ್ ಹೇಳಿದರು.
ಬ್ಯಾಂಡ್‌ಸೆಟ್‌ನವರು ಮುಖ್ಯಮಂತ್ರಿ ಸುತ್ತ ಸುತ್ತುವರೆದೂ ತಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಾರೆ. ಆಗ ನಾಯಕ ಮಾಡಬೇಕಾದ ಕೆಲಸಗಳನ್ನೆ ಮರೆತು ಬಿಡುತ್ತಾನೆ. ಇಂತಹ ಬ್ಯಾಂಡ್‌ಸೆಟ್‌ಗಳನ್ನು ದೂರ ಇಡಿ. ಜನರ ದ್ವನಿಯಾಗಿ ಕೆಲಸ ಮಾಡಿ ಎಂದು ರಮೇಶ್‌ಕುಮಾರ್ ಯಡಿಯೂರಪ್ಪನವರಿಗೆ ಹೇಳಿದರು.
ಇದು ಬಹುಮತದ ಸರ್ಕಾರ ಆಗಬಾರದು. ಅಂತಃಕರಣ ಸರ್ಕಾರವಾಗಬೇಕು. ಅಂತಃಕರಣ ಸತ್ತು ಹೋದಾಗ ಅದು ಪ್ರಜಾಪ್ರಭುತ್ವ ಆಗುವುದಿಲ್ಲ. ಯಾವ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗೆ ಮೊದಲ ಪ್ರಾಶಸ್ತ್ಯ ಸಿಗುತ್ತಿಲ್ಲವೋ ಅದು ಪ್ರಜಾಪ್ರಭುತ್ವ ಅಲ್ಲ ಎಂದು ರಮೇಶ್ ಕುಮಾರ್ ಹೇಳಿ, ವಿರೋಧ ಪಕ್ಷಗಳುಹೇಗಿರಬೇಕು ಎಂಬ ಬಗ್ಗೆಯೂ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ನೀಡಿದ ರಮೇಶ್‌ಕುಮಾರ್, ವಿರೋಧ ಪಕ್ಷದ ನಾಯಕರಾಗಿ ಸಮಾಜವಾದಿ ನಾಯಕ ಲೋಹಿಯಾ, ಶಾಂತವೇರಿಗೋಪಾಲಗೌಡರ ಉದಾಹರಣೆಯನ್ನು ನೀಡಿದರು.
ವಿರೋಧ ಪಕ್ಷಗಳು ಜನರ ಕರುಳಿನ ದ್ವನಿಯಾಗಬೇಕು. ಆಡಳಿತದಲ್ಲಿ ಅವಕಾಶ ಸಿಕ್ಕಲ್ಲ ಎಂದು ವಿರೋಧಪಕ್ಷವಾಗಬಾರದು. ಎಲ್ಲವನ್ನು ವಿರೋಧಿಸುವುದು ವಿರೋಧ ಪಕ್ಷದ ಕೆಲಸವಲ್ಲ. ಜನರ ಸಮಸ್ಯೆ ಆಧಾರದ ಮೇಲೆ ದ್ವನಿ ಎತ್ತಬೇಕು ಎಂದು ರಮೇಶ್‌ಕುಮಾರ್ ಹೇಳಿದರು.