ಬ್ಯಾಂಕ ನೌಕರರು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವ್ಯವಹರಿಸಿ: ಸಂಸದ ಉದಾಸಿ

ಗದಗ, ಜ 6- ಬ್ಯಾಂಕುಗಳು ಸೇವಾ ವಲಯವಾಗಿ ಕಾರ್ಯನಿರ್ವಹಿಸುತ್ತಿದ್ದು ಬ್ಯಾಂಕಿನ ಅಧಿಕಾರಿ ಸಿಬ್ಬಂದಿಗಳು ಅಧಿಕಾರಿ ಶಾಹಿ ಧೋರಣೆ ತಾಳದೆ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವ್ಯವಹರಿಸುವಂತೆ ಸಂಸದ ಶಿವಕುಮಾರ ಉದಾಸಿ ಹೇಳಿದರು.
ಗದಗ ಜಿಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿ.ಎಲ್.ಆರ್.ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್ಥಿಕ ಸಾಲಿನ ಮಾಹಿತಿಗಳನ್ನು ಬ್ಯಾಂಕುಗಳು ಪ್ರತ್ಯೇಕವಾಗಿ ನೀಡಬೇಕು. ಇದರಲ್ಲಿ ಬ್ಯಾಂಕುಗಳು ನೀಡಿರುವ ಸಾಲ, ಗುರಿ, ಮರುಪಾವತಿ, ಶೇಕಡಾವಾರು ಸಾಧನೆಯ ಮಾಹಿತಿಯನ್ನು ಸಭೆಗೆ ಒದಗಿಸಲು ತಿಳಿಸಿದರು.
ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿ ರೈತರಿಂದ ಹಲವಾರು ದೂರುಗಳು ಬರುತ್ತಿದ್ದು ಅಧಿಕಾರಿಗಳು ತಕ್ಷಣ ಸ್ಪಂಧಿಸಿ ಪರಿಹಾರ ನೀಡಬೇಕೆಂದು ಸೂಚಿಸಿದರು. ಅಲ್ಲದೇ ಎಸ್.ಬಿ.ಆಯ್. ನಿಂದ ಕಟಬಾಕಿ ರೈತರ ಸಾಲ ಮನ್ನಾ ಯೋಜನೆಯ ಸದುಪಯೋಗ ಪಡೆದ ರೈತರ ಸಿವಿಲ್ ಸ್ಕೋರ್ ಕಡಿಮೆ ಮಾಡುತ್ತಿದ್ದು ಇದರಿಂದ ರೈತರಿಗೆ ಬೇರೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಕಷ್ಟಸಾಧ್ಯವಾಗುತ್ತಿದ್ದು ಕಾರಣ ಸಾಲಮನ್ನಾ ಆಗಿರುವ ರೈತರ ಸಿವಿಲ್ ಸ್ಕೋರ್ ಕಡಿಮೆಗೊಳಿಸದಂತೆ ಸಿವಿಲ್ ಸ್ಕೋರಗೆ ರಿಯಾಯತಿ ನೀಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವದು ಎಂದರು.
ಫಸಲ ಭೀಮಾ ಯೋಜನೆಯಡಿ ಕಂತು ಪಾವತಿಗೆ ನಿಗದಿಪಡಿಸಿದ ಕೊನೆಯ ದಿನಾಂಕದಂತೆ ಬೆಳೆ ಕಟಾವು ಮಾಡಿದ ನಂತರ ಒಂದು ತಿಂಗಳೊಳಗಾಗಿ ವಿಮಾ ಪರಿಹಾರ ಮೊತ್ತ ಪಾವತಿಸದಿದ್ದಲ್ಲಿ ಸಂಬಂಧಿಸಿದ ವಿಮಾ ಕಂಪನಿಗಳು ರೈತರಿಗೆ ಶೇ.12 ರಂತೆ ಬಡ್ಡಿ ಸಹಿತ ರೈತರ ನಷ್ಟವನ್ನು ತುಂಬಬೇಕು. ಈ ಕುರಿತು ಬ್ಯಾಂಕಿನ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೇ ಕೃಷಿ ತೋಟಗಾರಿಕೆ ಇಲಾಖೆಗಳು ರೈತರಲ್ಲಿ ಜಾಗೃತಿ ಮೂಡಿಸಲು ಸಂಸದರಾದ ಶಿವಕುಮಾರ ಉದಾಸಿ ತಿಳಿಸಿದರು.
ಜಿಲ್ಲೆಯ ಮಾಚೇನಹಳ್ಳಿಯಲ್ಲಿರುವ ಬರೋಡಾ ಬ್ಯಾಂಕ್ ಕೆಲವು ವರ್ಷಗಳಿಂದ ನಷ್ಟದಲ್ಲಿ ಸಾಗುತ್ತಿದ್ದು ಸದರಿ ಶಾಖೆಯನ್ನು ಬೇರೆಡೆ ಸ್ಥಳಾಂತರಿಸುವ ಕುರಿತು ಅಧಿಕಾರಿಗಳು ಸಂಸದರ ಗಮನಕ್ಕೆ ತಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಯಾವುದೇ ಕಾರಣಕ್ಕೂ ಗ್ರಾಮದ ಸಾರ್ವಜನಿಕರಿಗೆ ಬ್ಯಾಂಕಿನ ಸೌಲಭ್ಯಗಳಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಬ್ಯಾಂಕಿನ ಶಾಖೆಯನ್ನು ಬೇರೆಡೆ ಸ್ಥಳಾಂತರಿಸುವುದನ್ನು ಕೈಬಿಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೇ ನಷ್ಟದಲ್ಲಿರುವ ಬ್ಯಾಂಕಿನ ಶಾಖೆಯನ್ನು ಲಾಭದಾಯಕದತ್ತ ಕೊಂಡೊಯ್ಯುವ ಕುರಿತು ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲೀಡ್ ಬ್ಯಾಂಕ ವ್ಯವಸ್ಥಾಪಕರಾದ ಮುರಳಿ ನಾಯಕ ಮಾತನಾಡಿ ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದಲ್ಲಿ ಬ್ಯಾಂಕ ಆಫ್ ಬರೋಡಾದ ನೂತನ ಶಾಖೆಯನ್ನು ಆರಂಭಿಸಲಾಗಿದ್ದು ಪೇಠಾಲೂರು ಸೇರಿದಂತೆ ಸುತ್ತಲಿನ ಐದು ಗ್ರಾಮಗಳನ್ನು ಬ್ಯಾಂಕುಗಳ ಸಿ.ಎಸ್.ಆರ್. ನಿಧಿಯಿಂದ ಮೂಲ ಸೌಕರ್ಯ ಸೇರಿದಂತೆ ಆರೋಗ್ಯ, ಶಿಕ್ಷಣಕ್ಕೆ ಪೆÇ್ರೀತ್ಸಾಹಿಸಲಾಗುವುದು ಎಂದರು.
ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ನೀಡುವ ಸಾಲ ಯೋಜನೆಯಡಿ ಜಿಲ್ಲೆಯಲ್ಲಿ ಡಿಸೆಂಬರ ಅಂತ್ಯದವರೆಗೆ 4962 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು 2434 ಜನರಿಗೆ ಸಾಲ ಮಂಜೂರಾತಿ ನೀಡಲಾಗಿರುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲೆಯು ಉತ್ತಮ ಸಾಧನೆಗೈದಿದ್ದು ಶಿಶು, ಕಿಶೋರ ಹಾಗೂ ತರುಣ ಸಾಲ ಯೋಜನೆಯಡಿ ಒಟ್ಟು 9225 ಖಾತೆಗಳಿಗೆ 322.22 ಕೋಟಿ ರೂ ಗಳನ್ನು ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ 30ರ ವರೆಗೆ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಜಿಲ್ಲೆಯ 219561 ಖಾತೆದಾರರು ವಿಮಾ ಕಂತನ್ನು ಪಾವತಿಸಿರುತ್ತಾರೆ. ಅದೇ ರೀತಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ಜಿಲ್ಲೆಯ 84037 ಜನರು ವಾರ್ಷಿಕ ರೂ. 330 ವಂತಿಗೆ ಪಾವತಿಸುವ ಮೂಲಕ ಯೋಜನೆಗೆ ಒಳಪಟ್ಟಿರುತ್ತಾರೆ ಎಂದು ಮಾಹಿತಿ ನೀಡಿದರು.