ಬ್ಯಾಂಕ್ ಸಿಬ್ಬಂದಿಗಳ ಅನುಚಿತ ವರ್ತನೆ ಖಂಡಿಸಿ ಮೇ.೨೦ ರಂದು ಪ್ರತಿಭಟನೆ

ದಾವಣಗೆರೆ.ಮೇ.೧೫: ಕೊಡಗನೂರು ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳು  ರೈತರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು,  ಸಿಬ್ಬಂದಿಗಳ ವಿರುದ್ಧ ಮೇ ೨೦ ರ ಬೆಳಿಗ್ಗೆ ೧೧.೩೦ ಕ್ಕೆ ಬ್ಯಾಂಕ್ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ  ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಎ.ಆರ್. ಕರಿಬಸಪ್ಪ  ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸಾಲ ಇಲ್ಲದ ಬಗ್ಗೆ ಕ್ಲಿಯರೆನ್ಸ್ ಕೇಳಲು ಹೋದರೆ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ಕ್ಲಿಯರೆನ್ಸ್ ನೀಡಲು ಬರುವುದಿಲ್ಲ ಎಂದು ಹೇಳುತ್ತಾರೆ. ಅದನ್ನೇ ಬರವಣಿಗೆಯಲ್ಲಿ ನೀಡಲು ರೈತರು ಕೇಳಿದರೆ, ನಮ್ಮ  ವೀಡಿಯೋ ಮಾಡುವ ಮೂಲಕ ರೈತರು ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಸುಳ್ಳು ವದಂತಿ ಹರಡುತ್ತಿದ್ದಾರೆ ಎಂದು ಆರೋಪಿಸಿದರು.ಆಭರಣ ಸಾಲ ತೀರಿಸದವರಿಗೆ ನೋಟೀಸ್ ನೀಡಿ ಹರಾಜು ಮಾಡಿದ್ದು, ಸಾಲ ತೀರಿಸಿ ಉಳಿದ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡದೇ ದುರ್ಬಳಕೆ ಮಾಡಿದ್ದಾರೆ ಎಂದರು.ರೈತರ ಕೆಲಸವನ್ನು ಮಾಡಿಕೊಡದೆ, ಪದೇ ಪದೇ ಬ್ಯಾಂಕುಗಳಿಗೆ ಅಲೆದಾಡುವಂತೆ ಮಾಡುತ್ತಿದ್ದು,  ಸೂಕ್ತ ಸ್ಪಂದನೆ ತೋರುತ್ತಿಲ್ಲಾ.ಅಧಿಕಾರ ವರ್ಗದವರು ಮಾಡುತ್ತಿರುವ ದೌರ್ಜನ್ಯ ಅಷ್ಟಿಷ್ಟಲ್ಲ. ಬಡ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು. ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಯ ಮುಖ್ಯ ವ್ಯವಸ್ಥಾಪಕರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕು ಎಂದರು.ಪ್ರತಿಭಟನೆಯ ನಂತರವೂ ವ್ಯವಸ್ಥಾಪಕರು ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರಧಾನ ಕಚೇರಿ, ಶಾಮನೂರು. ಇಲ್ಲಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಕೊಗ್ಗನೂರು ಹನುಮಂತಪ್ಪ, ಮಂಜುಳಾ ಅಕ್ಕಿ, ಕೊರಟಿಕೆರೆ ಜಯಣ್ಣ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಗರಿಗರಿ ನಾಗೇಂದ್ರಪ್ಪ, ಬಿ.ಸಿ. ಮಂಜಪ್ಪ ಆಲೂರು, ದಿಗ್ಗೇನಹಳ್ಳಿ ಶಿವಮೂರ್ತಿ, ಎಂ.ಎನ್. ರಫೀಕ್, ಬಲ್ಲೂರು ಅಣ್ಣಪ್ಪ ಉಪಸ್ಥಿತರಿದ್ದರು.