
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೦; ಬ್ಯಾಂಕ್ ರಾಷ್ಟ್ರೀಕರಣವು ನಮ್ಮ ದೇಶದ ಬಹುದೊಡ್ಡ ಆರ್ಥಿಕ ಕ್ರಾಂತಿಯಾಗಿದೆ. ಬ್ಯಾಂಕ್ ರಾಷ್ಟ್ರೀಕರಣದ ಫಲವಾಗಿಯೇ ನಮ್ಮ ದೇಶ ಇಂದು ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರಕಾರದ ಖಾಸಗೀಕರಣದ ಪರವಾದ ನೀತಿಗಳಿಂದ ಬ್ಯಾಂಕುಗಳು ಮಾತ್ರವಲ್ಲದೇ ಅನೇಕ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಅಪಾಯಕ್ಕೆ ಒಳಗಾಗಿವೆ. ಬ್ಯಾಂಕುಗಳ ಖಾಸಗೀಕರಣವಾದರೆ ಜನಸಾಮಾನ್ಯರಿಗೆ ಸೇರಿದ ಸರಿ ಸುಮಾರು 180 ಲಕ್ಷ ಕೋಟಿ ರೂಪಾಯಿಗಳ ಠೇವಣಿ ಹಣವು ಅಪಾಯಕ್ಕೆ ಸಿಲುಕಲಿದೆ. ಆದ್ದರಿಂದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಈ ದೇಶದ ನಾಗರಿಕರಿಗೆ ಸೇರಿದ ಆಸ್ತಿಗಳಾಗಿವೆ. ಅವುಗಳನ್ನು ಉಳಿಸಿಕೊಳ್ಳುವುದು ಪ್ರತಿ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಕಾರ್ಮಿಮ ಮುಖಂಡ ಹಾಗೂ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹೆಚ್.ಜಿ.ಉಮೇಶ್ ಅವರಗೆರೆ ಹೇಳಿದರು. ಅವರು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಆಯೋಜಿಸಿದ್ದ 55 ನೇ ಬ್ಯಾಂಕ್ ರಾಷ್ಟ್ರೀಕರಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ – ಎಐಬಿಇಎ ಯು ಬ್ಯಾಂಕ್ ರಾಷ್ಟ್ರೀಕರಣದ ರೂವಾರಿಯಾಗಿದೆ. ಜೊತೆಗೆ ಆಗಿನ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿಯವರ ದೂರದರ್ಶಿತ್ವ ಹಾಗೂ ಆರ್ಥಿಕ ಮುತ್ಸದ್ಧಿತನವೂ ಕಾರಣವಾಗಿತ್ತು. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದೊಂದಿಗೆ ಎಐಟಿಯುಸಿ ಕೂಡಾ ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಹೋರಾಟ ನಡೆಸಿತ್ತು ಎಂದು ಸ್ಮರಿಸಿದರು.ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಬಿಇಎಫ್ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ 1960 ರ ದಶಕದಲ್ಲಿ ಕಾಮ್ರೇಡ್ ಪ್ರಭಾತ್‌ಕರ್, ಕಾಮ್ರೇಡ್ ಹೆಚ್.ಎಲ್.ಪರ್ವಾನಾ, ಕಾಮ್ರೇಡ್ ಚಡ್ಡಾ ಮುಂತಾದ ಅನೇಕ ಕಾರ್ಮಿಕ ಮುಖಂಡರ ನೇತೃತ್ವದಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಹೋರಾಡಿದ್ದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇಂದು ಕಾಮ್ರೇಡ್ ಸಿ.ಹೆಚ್.ವೆಂಕಟಾಚಲಂ, ಕಾಮ್ರೇಡ್ ಹೆಚ್.ವಸಂತ ರೈ, ಕಾಮ್ರೇಡ್ ಎಂ.ಎಸ್.ಶ್ರೀನಿವಾಸನ್, ಕಾಮ್ರೇಡ್ ಜಯನಾಥ್ ಮೊದಲಾದ ನಾಯಕರ ನೇತೃತ್ವದಲ್ಲಿ ರಾಷ್ಟ್ರೀಕರಣದ ಉಳಿವಿಗಾಗಿ ನಿರಂತರವಾಗಿ ಹೋರಾಡುತ್ತಿದೆ. ಬ್ಯಾಂಕ್ ರಾಷ್ಟ್ರೀಕರಣವು ದೇಶಕ್ಕೆ ಆರ್ಥಿಕ ಸಬಲತೆಯನ್ನು ನೀಡಿದೆ. ಈಗಲೂ ವರ್ಷಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನೂ ಗಳಿಸುತ್ತಿದೆ. ಆದರೆ ಇನ್ನೊಂದೆಡೆ ಬ್ಯಾಂಕುಗಳ ವಿಲೀನೀಕರಣ, ಖಾಸಗೀಕರಣದ ಹುನ್ನಾರ, ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದಿರುವ ಖಾಸಗಿ ಬಂಡವಾಳಷಾಹಿಗಳು, ಬ್ಯಾಂಕಿಂಗ್ ಕಾಯಿದೆಗೆ ಅನಗತ್ಯವಾದ ತಿದ್ದುಪಡಿಗಳು ಹೀಗೆ ಹತ್ತು ಹಲವಾರು ಸರಕಾರದ ಕೆಟ್ಟ ನೀತಿಗಳ ಫಲವಾಗಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಕತ್ತಿಯ ಅಲುಗಿನ ಮೇಲೆ ಸಾಗುತ್ತಿದೆ. ಆದರೆ ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗ ಅತ್ಯಗತ್ಯವಾಗಿ ಬೇಕಾಗಿರುವ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸಿಕೊಂಡು ಇನ್ನಷ್ಟು ಬೆಳೆಸಿಕೊಂಡು ಹೋಗಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.ಸಂಘದ ಅಧ್ಯಕ್ಷ ಕಾಮ್ರೇಡ್ ಬಿ.ಆನಂದಮೂರ್ತಿ ಮಾತನಾಡಿ ಬ್ಯಾಂಕಿಂಗ್ ಸೌಲಭ್ಯವು ಈ ದೇಶದ ಪ್ರತೀ ನಾಗರಿಕ ಮೂಲಭೂತ ಹಕ್ಕಾಗಬೇಕು ಮತ್ತು ಈ ಉದ್ದೇಶ ಈಡೇರಲು ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು ಮತ್ತು ವಿಸ್ತಾರಗೊಳಿಸಬೇಕು ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ನಿಲುವಾಗಿದೆ. ಈ ಉದ್ದೇಶದ ಈಡೇರಿಕೆಗೆ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ಹೇಳಿದರು.ಸಂಘದ ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ ಸ್ವಾಗತಿಸಿದರು ಹಾಗೂ ಸಂಘದ ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ ವಂದನಾರ್ಪಣೆ ಮಾಡಿದರು.ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ನೌಕರರ ಒಕ್ಕೂಟದ ಹೆಚ್.ಸುಗೀರಪ್ಪ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಗಳಾದ ಆರ್.ಆಂಜನೇಯ, ಹೆಚ್.ಎಸ್.ತಿಪ್ಪೇಸ್ವಾಮಿ, ಎಂ.ಸತೀಶ್, ಕೆ.ರವಿಶಂಕರ್, ಪರಶುರಾಮ, ಅಜಯ್ ಕುಮಾರ್, ಸುರೇಶ್ ಚೌಹಾಣ್, ಸುಮಂತ್, ಶ್ರೀನಿವಾಸ ನಾಡಿಗ್, ಡಿ.ಎನ್.ಅಣ್ಣಪ್ಪ, ಕೆ.ಶಶಿಶೇಖರ್, ಅಮೃತಾ, ರಮೇಶ್, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.