ಬ್ಯಾಂಕ್ ನೌಕರರ ಮುಷ್ಕರ ಗ್ರಾಹಕರ ಪರದಾಟ


ನವದೆಹಲಿ, ಮಾ.೧೫- ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ೧೪ ಬ್ಯಾಂಕ್ ಗಳನ್ನು ವಿಲೀನ ಮಾಡಿರುವ ಕೇಂದ್ರ ಸರ್ಕಾರ ಇನ್ನೂ ಎರಡು ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ದೇಶಾದ್ಯಂತ ಬ್ಯಾಂಕ್ ಸಿಬ್ಬಂದಿಗಳನ್ನು ಕೆರಳಿಸಿದೆ
ಸರ್ಕಾರಿ ಸಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ದೇಶದಾದ್ಯಂತ ಬ್ಯಾಂಕ್ ಸಂಘಟನೆಗಳ ಸಂಯುಕ್ತಗಳ ವೇದಿಕೆ ಇಂದು ಮತ್ತು ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಗ್ರಾಹಕರು ಪರದಾಡುವಂತಾಯಿತು.
ಗ್ರಾಹಕರಿಗೆ ಎಟಿಎಂನಲ್ಲಿ ನಗದು ಪಡೆಯಲು, ಚೆಕ್ ಕ್ಲಿಯರೆನ್ಸ್, ಸಾಲಗಳ ಅರ್ಜಿ ಇತ್ಯರ್ಥ, ಸೇರಿದಂತೆ ವಿವಿಧ ಸೇವೆಗಳಲ್ಲಿ ಇಂದು ಬಾರಿ ವ್ಯತ್ಯಯ ಉಂಟಾಗಿದ್ದು ಜನರು ಪರದಾಡುವಂತಾಯಿತು. ನಾಳೆಯೂ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ದೇಶಾದ್ಯಂತ ಇಂದು ಮತ್ತು ನಾಳೆ ನಡೆಯಲಿರುವ ಮುಷ್ಕರದಲ್ಲಿ ೧೦ ಲಕ್ಷಕ್ಕೂ ಅಧಿಕ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಎರಡು ದಿನಗಳ ಕಾಲ ನಡೆಯಲಿರುವ ಮುಷ್ಕರ ದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದು ಇಡೀ ಬ್ಯಾಂಕಿಂಗ್ ಸೇವೆ ಸಂಪೂರ್ಣ ವಾಗಿ ಸ್ತಂಬ್ದಗೊಂಡಿದೆ.ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಎಲ್ಲಾ ಸರ್ಕಾರಿ ಬ್ಯಾಂಕ್‌ಗಳಲ್ಲಿ ಕೂಡ ಇಂದು ಮತ್ತು ನಾಳೆ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ವ್ಯತ್ಯಯ
ವಾಗಲಿದೆ. ಹಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳು ಸುಗಮ ಕಾರ್ಯನಿರ್ವಹಣೆಗೆ ಸೂಚಿಸಿದ್ದರೂ ಇಂದು ಮತ್ತು ನಾಳೆ ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಸಿಗದೆ ಪರದಾಡುವುದು ಖಚಿತವಾಗಿದೆ.
ಖಾಸಗೀಕರಣ
ಬಂಡವಾಳ ಹಿಂತೆಗೆತ ಯೋಜನೆಯಡಿ ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರದಲ್ಲಿ ಪ್ರಕಟಿಸಿದ್ದರು.ಕೇಂದ್ರ ಸರ್ಕಾರದ ಈ ಕ್ರಮವನ್ನು ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ ತೀವ್ರವಾಗಿ ಖಂಡಿಸಿದ್ದು ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಕ್ಕೆ ಕೈ ಹಾಕಬಾರದು ಎಂದು ಆಗ್ರಹಿಸಿದ್ದಾರೆ.ಐಡಿಬಿಐ ಬ್ಯಾಂಕ್‌ನ ಪ್ರಮುಖ ಶೇರುಗಳನ್ನು ೨೦೧೯ರಲ್ಲಿ ಎಲ್‌ಐಸಿಗೆ ಮಾರಾಟ ಮಾಡಿದೆ.

ಸಭೆ ವಿಫಲ
ಮಾರ್ಚ್ ೪, ೫ ಮತ್ತು ೯ ರಂದು ದೇಶಾದ್ಯಂತ ಎಲ್ಲ ಬ್ಯಾಂಕುಗಳ ನೌಕರರ ಒಕ್ಕೂಟದೊಂದಿಗೆ ಮುಖ್ಯ ಕಾರ್ಮಿಕ ಆಯುಕ್ತರು ಸಭೆ ನಡೆಸಿದ್ದರೂ ಯಾವುದೇ ಫಲಪ್ರದವಾಗದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಬ್ಯಾಂಕ್‌ಗಳ ಖಾಸಗೀಕರಣದಿಂದಾಗಿ ನೌಕರರು ಭವಿಷ್ಯದಲ್ಲಿ ತೊಂದರೆಗೆ
ಸಿಲುಕಬೇಕಾಗುತ್ತದೆ. ಕೇಂದ್ರ ಸರ್ಕಾರ ಇಂತಹ ಯಾವುದೇ ಕ್ರಮಕ್ಕೆ ಕೈ ಹಾಕಬಾರದು ಎಂದು ಬ್ಯಾಂಕ್ ನೌಕರರ ಸಂಯುಕ್ತ ಒಕ್ಕೂಟ ಆಗ್ರಹಿಸಿದೆ.