ಬ್ಯಾಂಕ್‌ ಎಟಿಎಂ, ಮನೆ ಕಳ್ಳತನ :ನಾಲ್ವರು ಕಳ್ಳರ ಬಂಧನ

ಮಾನ್ವಿ.ನ.08- ಪಟ್ಟಣ, ರಾಯಚೂರು ನಗರ ಸೇರಿದಂತೆ ಸಿರವಾರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕು, ಎ.ಟಿ.ಎಂ ಹಾಗೂ ಮನೆಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಮಾನ್ವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಶನಿವಾರ ಸಾಯಂಕಾಲ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಸಿಂಧನೂರು ಡಿ.ವೈ.ಎಸ್.ಪಿ ವಿಶ್ವನಾಥ ಕುಲಕರ್ಣಿ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರಕಾಶ ನಿಕ್ಕಂ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿಬಾಬು ಇವರ ಮಾರ್ಗದರ್ಶನದ ಮೇರೆಗೆ ಸಿಪಿಐ ದತ್ತಾತ್ರೇಯ ಎಂ.ಕಾರ್ನಾಡ್, ಮಾನ್ವಿ ಠಾಣೆ, ಸಿರವಾರ ಹಾಗೂ ಕವಿತಾಳ ಪಿಎಸ್ಐಗಳಾದ ಸಿದ್ರಾಮಪ್ಪ ಬಿದರಾಣಿ, ಸುಜಾತ ನಾಯಕ ಹಾಗೂ ವೆಂಕಟೇಶ ಇವರ ನೇತ್ರತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡದಲ್ಲಿದ್ದ ಎ.ಎಸ್.ಐ ಗಳಾದ ಬಸವರಾಜ, ಯಂಕನಗೌಡ ಸಿಬ್ಬಂದಿಯವರಾದ ವಾಹನ ಚಾಲಕ ಎ.ಹೆಚ್. ಸಿ ಬಸವರಾಜ ನಾಯಕ ಸುಂಕೇಶ್ವರ, ರಾಮಪ್ಪ, ರಮೇಶ, ಮಲ್ಲಾರಡ್ಡೆಪ್ಪ , ಗೋವಿಂದರಾಜ್, ಆಫ್ಘಲ್ ಪಾಷಾ, ಹುಸೇನಸಾಬ್, ಚಾಂದಪಾಶಾ, ಡೇವಿಡ್, ಶಿವಾರೆಡ್ಡಿ, ಶಾಂತಕುಮಾರ ಇವರುಗಳು ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾನ್ವಿ ಪಟ್ಟಣದ ವೀರೇಶ್ ಚನ್ನದಾಸರ್, ಅಬ್ಬಾಸ್ ಖಾನ್, ಜಾಫರ್ ಸಾಧಿಕ್, ಜಾವೇದ್ ಅಕ್ತರ್ ಎಂಬ ನಾಲ್ಕು ಕಳ್ಳರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಈ ಆರೋಪಿತರು ಮಾನ್ವಿ ನಗರದ ಕೆನರಾ ಬ್ಯಾಂಕ್ ಎಟಿಎಂ, ಹಿರೇಕೊಟ್ನೆಕಲ್ ಬ್ಯಾಂಕ್ ಆಫ್ ಇಂಡಿಯಾ, ಸಿರವಾರ ಪಟ್ಟಣದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ರಾಯಚೂರು ನಗರದ ಸಿಂಡಿಕೇಟ್ ಬ್ಯಾಂಕ್ ಎಟಿಎಂಗಳ ಶೆಟರ್ ಮುರಿದು ಕಳ್ಳತನ ಮಾಡಲು ಪ್ರಯತ್ನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅದೇರೀತಿ ಮಾನ್ವಿ ನಗರದ ಡಿಪೋ ಹಿಂದೆ ಒಂದು ಮನೆ ಮತ್ತು ಬಸವ ನಗರದಲ್ಲಿ ಒಂದು ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಈ ಆರೋಪಿಗಳಿಂದ ಒಂದು ಸ್ಕೂಟರ್, ಒಂದು ಮೋಟಾರ್ ಸೈಕಲ್, 8 ತೊಲೆ ಬಂಗಾರದ ಆಭರಣಗಳು, 15 ಸಾವಿರ ನಗದು ಹಣ ಮತ್ತು ಒಂದು ಮೊಬೈಲ್ ಸೇರಿ ಒಟ್ಟು 3 ಲಕ್ಷ 39 ಸಾವಿರ ರೂ. ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಕಳ್ಳರನ್ನು ಪತ್ತೆ ಮಾಡಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ತಂಡದ ಕೆಲಸವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಡಿ.ವೈ.ಎಸ್.ಪಿ ವಿಶ್ವನಾಥ ಕುಲಕರ್ಣಿ ತಿಳಿಸಿದರು.