ಬ್ಯಾಂಕ್‌ಗೆ ಶಕ್ತಿ ಫುಡ್ ಕಂಪನಿ ವಂಚನೆ ಇಬ್ಬರ ವಿಚಾರಣೆ

ನವದೆಹಲಿ,ಸೆ.೨೫-ಶಕ್ತಿ ಬೋಗ್ ಫುಡ್ ಲಿಮಿಟೆಡ್ ವಿರುದ್ದ ಕೇಳಿಬಂದಿರುವ ೩,೨೬೯ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಬ್ಬರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ.

ಸೆಪ್ಟೆಂಬರ್ ೧೭ ರಂದು ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಉತ್ತರ ಪ್ರದೇಶದ ೧೩ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿಮಾಡಿ ಪ್ರಮುಖ ಆಸ್ತಿಪಾಸ್ತಿ ಪರಿಶೀಲಿಸಿ ಮಹತ್ವದ ದಾಖಲೆ ಪತ್ರ ವಶಪಡಿಸಿಕೊಂಡಿತ್ತು.

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಲೇವಾದೇವಿ ಕಾಯ್ದೆ ಅಡಿ ಶಕ್ತಿ ಭೋಗ್ ಫುಡ್ ಲಿಮಿಟೆಡ್ ನ ಅಶೋಕ್ ಕುಮಾರ್ ಗೋಯಲ್ ಮತ್ತು ದೇವಕಿನಂದನ್ ಗಾರ್ಗ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಬ್ಯಾಂಕಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸಮನ್ಸ್ ಪಡೆದು ಇಬ್ಬರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಶಕ್ತಿ ಬೋಗ್ ಪುಡ್ ಲಿಮಿಟೆಡ್ ವಿವಿಧ ಬ್ಯಾಂಕುಗಳಿಂದ ೩,೨೬೯.೪೨ ಕೋಟಿ ರೂಪಾಯಿ ಸಾಲ ಪಡೆದು ಅದನ್ನು ಮರುಪಾವತಿ ಮಾಡದೆ ವಂಚನೆ ಮಾಡಲಾಗಿದ್ದು ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಹಣ ಲೇವಾದೇವಿ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಿ ನಡೆಸುತ್ತಿತ್ತು. ಮತ್ತೊಂದೆಡೆ ಸಿಬಿಐ ಕೂಡ ಪ್ರಕರಣದ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಕಳೆದವಾರ ಉತ್ತರಪ್ರದೇಶ ಮತ್ತು ದೆಹಲಿಯ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ್ದಾರೆ ನಿರ್ದೇಶನಾಲಯ ಮಹತ್ವದ ದಾಖಲೆ ಪತ್ರಗಳನ್ನು ಮತ್ತು ಡಿಜಿಟಲ್ ಸಾಕ್ಷಿಗಳನ್ನು ವಶಪಡಿಸಿಕೊಂಡಿತ್ತು. ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಬ್ಯಾಂಕಿನ ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದೆ