ಬ್ಯಾಂಕ್‌ಗಳತ್ತ ಗ್ರಾಹಕರು ವಿರಳ: ಅಂಚೆ ಕಚೇರಿಯಲ್ಲಿ ಸೇವೆ ಅಲಭ್ಯ

 ದಾವಣಗೆರೆ,ಏ.29: ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಿಧಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ತುರ್ತು ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದ್ದರೂ ಬ್ಯಾಂಕ್‌ಗಳತ್ತ ಬರುವ ಗ್ರಾಹಕರ ಸಂಖ್ಯೆ ವಿರಳವಿದೆ.ಬ್ಯಾಂಕ್ ಗ್ರಾಹಕರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ನಡುವೆಯು ಬ್ಯಾಂಕ್‌ಗಳ ಸೇವೆ ಮಧ್ಯಾಹ್ನ 2 ಗಂಟೆಗೆ ನಿಗದಿ ಮಾಡಿ, ಕೋವಿಡ್ ಸರಕ್ಷತಾ ಕ್ರಮಗಳೊಂದಿಗೆ ಗ್ರಾಹಕರಿಗೆ ಸೇವೆ ಒದಗಿಸಲು ಅನುವು ಮಾಡಿಕೊಟ್ಟಿದೆ. ಆದರೆ, ಕರ್ಫ್ಯೂ ಸಮಯದಲ್ಲಿ ಹೊರಗಡೆ ಹೋದರೆ, ಪೊಲೀಸರ ಲಾಠಿ ಏಟು ತಿನ್ನಬೇಕಾಗುತ್ತದೆ ಮತ್ತು ದಂಡ ತೆರಬೇಕಾಗುತ್ತದೆ ಎಂಬ ಕಾರಣದಿಂದ ಹೆಚ್ಚಿನ ಗ್ರಾಹಕರು ಬ್ಯಾಂಕ್‌ಗಳತ್ತ ಸುಳಿಯುತ್ತಿಲ್ಲ.
ಏನೇನು ಸೇವೆ ಲಭ್ಯ:
ಬ್ಯಾಂಕ್‌ಗಳಲ್ಲಿ ಸರ್ಕಾರಕ್ಕೆ ಹಣ ಕಟ್ಟಲು, ಚೆಕ್ಕುಗಳ ಕ್ಲಿಯರಿಂಗ್, ತೆರಿಗೆ ಪಾವತಿ, ಹಣ ವರ್ಗಾವಣೆ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲು ಮತ್ತು ಅತ್ಯಗತ್ಯ ಸಂದರ್ಭದಲ್ಲಿ ಚಿನ್ನದ ಆಭರಣಗಳ ಮೇಲೆ ಸಾಲ ಸೌಲಭ್ಯ ಲಭ್ಯವಿದೆ. ಆದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ.
ಅಂಚೆ ಕಚೇರಿ ಸೇವೆ ಅಲಭ್ಯ:
ಇನ್ನೂ ಅಂಚೆ ಕಚೇರಿಗಳಲ್ಲಿ ಸಿಗುವ ವಿವಿಧ ಪಿಂಚಣಿ ಸೇರಿದಂತೆ ಇತರೆ ಸೇವೆಗಳನ್ನು ಪಡೆಯಲು ಹೋಗುವ ಗ್ರಾಹಕರಿಗೆ ಸಮರ್ಪಕವಾಗಿ ಸೇವೆ ದೊರೆಯುತ್ತಿಲ್ಲ. ಹೀಗಾಗಿ ಕರ್ಫ್ಯೂ ಮಧ್ಯೆಯೂ ಅಂಚೆ ಕಚೇರಿಗಳಿಗೆ ಎಡ ತಾಕುತ್ತಿರುವ ಸಾರ್ವಜನಿಕರು ಸೇವೆ ಸಿಗದ ಕಾರಣ ಅಧಿಕಾರಿಗಳನ್ನು ಶಪಿಸುತ್ತಾ ವಾಪಾಸ್ ಆಗುತ್ತಿದ್ದಾರೆ.
ಮಧ್ಯಾಹ್ನ 2 ಗಂಟೆಯ ವರೆಗೆ ಸೇವೆ ನೀಡಬೇಕಾಗಿದ್ದ ಅಂಚೆ ಇಲಾಖೆ ಅಧಿಕಾರಿಗಳು 12 ಗಂಟೆ ಅಷ್ಟೋತ್ತಿಗೆ ಅಂಚೆ ಕಚೇರಿಗೆ ಬರುವ ಗ್ರಾಹಕರಿಗೆ ಯಾವುದೇ ಸೇವೆ ಇಲ್ಲ. ನಾಳೆ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು.ಬಾಕ್ಸ್ಬಾಕ್ಸ್: ರಸ್ತೆಯಲ್ಲಿ ಜನರ ಓಡಾಟ ಹೆಚ್ಚು
ಜನತಾ ಕರ್ಫ್ಯೂ ಜಾರಿಯಾಗಿದ್ದ ಮೊದಲ ದಿನದಲ್ಲಿ ರಸ್ತೆಗಳಲ್ಲಿ ಬೆಳಿಗ್ಗೆ 10 ಗಂಟೆಯ ಬಳಿಕ ವಾಹನ ಸಂಚಾರ ಇಲ್ಲದೆ ದೇವನಗರಿ ಸ್ತಬ್ಧವಾಗಿತ್ತು. ಆದರೆ, ಎರಡನೇ ದಿನವಾದ ಗುರುವಾರ ರಸ್ತೆಯಲ್ಲಿ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ದೃಶ್ಯ ಕಂಡು ಬಂತು.
ಕೆಲ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾತ್ರ ಪೊಲೀಸರನ್ನುಜ ನಿಯೋಜಿಸಲಾಗಿತ್ತು. ಹೀಗಾಗಿ ಪೊಲೀಸರು ಇರುವ ಪ್ರದೇಶ ಹೊರತು ಪಡಿಸಿ, ಇತರೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಕಾರು, ಬೈಕ್‌ಗಳ ಓಡಾಟ ಹೆಚ್ಚಾಗಿತ್ತು. ಇನ್ನೂ ಅಲ್ಲಲ್ಲಿ ಆಟೋಗಳ ಸಂಚಾರವೂ ಕಂಡು ಬಂತು.