ಬ್ಯಾಂಕ್‌ನ ಅಧಿಕಾರಿ ಗುಂಡೇಟಿಗೆ ಐವರು ಬಲಿ

ಕೆಂಟಕಿ (ಅಮೆರಿಕಾ), ಏ.೧೧- ಬ್ಯಾಂಕ್ ಉದ್ಯೋಗಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟು, ೯ ಮಂದಿ ಗಾಯಗೊಂಡ ಘಟನೆ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಬ್ಯಾಂಕ್‌ನಲ್ಲಿ ನಡೆದಿದೆ. ಗುಂಡಿನ ದಾಳಿ ನಡೆಸಿದ ಬ್ಯಾಂಕ್ ಉದ್ಯೋಗಿಯನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಇನ್ನು ಶೂಟೌಟ್‌ನ ನೇರ ದೃಶ್ಯಾವಳಿಯನ್ನು ದಾಳಿಕೋರ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಥಾಮಸ್ ಎಲಿಯಟ್ (೬೩), ಜೇಮ್ಸ್ ಟಟ್ (೬೪), ಜೋಶುವಾ ಬ್ಯಾರಿಕ್ (೪೦), ಜೂಲಿಯಾನಾ ಫಾರ್ಮರ್ (೪೫), ಡೀನಾ ಎಕರ್ಟ್ (೫೭) ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡ ೯ ಮಂದಿಯಲ್ಲಿ ಎರಡು ವಾರಗಳ ಹಿಂದೆಯಷ್ಟೇ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡ ವ್ಯಕ್ತಿ ಕೂಡ ಸೇರಿದ್ದಾನೆ. ಪೊಲೀಸ್ ಅಧಿಕಾರಿಯ ಮೆದುಳಿಗೆ ಗುಂಡಿನ ದಾಳಿ ನಡಸಲಾಗಿದ್ದು, ಸದ್ಯ ಆತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾನೆ. ದಾಳಿಯಲ್ಲಿ ಬ್ಯಾಂಕ್‌ನ ಹಿರಿಯ ಉಪಾಧ್ಯಕ್ಷ ಟೋಮಿ ಈಲಿಯಟ್ ಮೃತಪಟ್ಟಿದ್ದಾರೆ ಎಂಬ ವಿಚಾರವನ್ನು ಕೆಂಟಕಿಯ ಗವರ್ನರ್ ಆಂಡಿ ಬೆಶೆರ್ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಗವರ್ನರ್ ಬೆಶೆರ್, ಟೋಮಿ ಅವರು ನನಗೆ ಕಾನೂನು ಕಲಿಯುವ ವೇಳೆ ಹೆಚ್ಚಿನ ನೆರವು ನೀಡಿದ್ದರು. ಅಲ್ಲದೆ ಗವರ್ನರ್ ಹುದ್ದೆ ಅಲಂಕರಿಸುವ ವೇಳೆಗೆ ಕೂಡ ನೆರವು ನೀಡಿದ್ದರು. ಒಳ್ಳೆಯ ತಂದೆಯಾಗಲು ಕೂಡ ಸಲಹೆಗಳನ್ನು ನೀಡಿದ್ದರು ಎಂದು ತಿಳಿಸಿದ್ದಾರೆ.