ಬ್ಯಾಂಕ್‍ಗಳು ಕೆಳವರ್ಗದ ಜನರಿಗೆ ಅವಕಾಶ ಕಲ್ಪಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು


ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಮಾ.೧೪; ಕೆಳವರ್ಗದ ಅವಕಾಶ ವಂಚಿತರು ಹಾಗೂ ಶೋಷಿತರಿಗೆ, ದೇಶದ ಬ್ಯಾಂಕುಗಳು ಅವಕಾಶ ಕಲ್ಪಿಸಿ, ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಹಾಗೂ ಸಂಸದರಾದ ಎ.ನಾರಾಯಣಸ್ವಾಮಿ ಅವರು ಹೇಳಿದರು.ನಗರದ ಐಯುಡಿಪಿ ಲೇ ಔಟ್‍ನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾದ ಪಿ.ಎಂ. ಸೂರಜ್ ಪೋರ್ಟಲ್ ಉದ್ಘಾಟನೆ  ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ದೇಶದ ಶೇ.99 ರಷ್ಟು ಬ್ಯಾಂಕುಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ, ಇತರೆ ಅವಕಾಶ ವಂಚಿತರು ಹಾಗೂ ಶೋಷಿತರಿಗೆ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಸಮರ್ಪಕವಾಗಿ ನೀಡುವುದಿಲ್ಲ. ಕೆಳವರ್ಗದ ಜನರಿಗೆ ಬ್ಯಾಂಕ್‍ಗಳು ಸೌಲಭ್ಯಗಳನ್ನು ನೀಡುತ್ತಿಲ್ಲ. ಇದು ದೇಶವೇ ನಾಚಿಕೆ ಪಡುವ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ರಾಜ್ಯ ಸರ್ಕಾರ ಹಾಗೂ ವಿವಿಧ ನಿಗಮ ಮಂಡಳಿಗೆ ನೀಡುತ್ತಿರುವ ಹಣಕಾಸಿನ ಬಡ್ಡಿದರವನ್ನು ಕಡಿಮೆ ಮಾಡಲು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಳಿ ಚರ್ಚಿಸಿದ್ದರ ಫಲವಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಫಲಾನುಭವಿಗಳು ಸ್ವ-ಉದ್ಯೋಗ ಕೈಗೊಳ್ಳಲು ಶೇ.4 ರಷ್ಟು ಹಾಗೂ ಉದ್ದಿಮೆ ಸ್ಥಾಪಿಸಲು ಶೇ.3 ರಷ್ಟು ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಲಭಿಸುವಂತಾಗಿದೆ ಎಂದರು.ಬ್ಯಾಂಕ್ ಸೌಲಭ್ಯಗಳು ಫಲಾನುಭವಿಗಳಿಗೆ ನೇರವಾಗಿ ದೊರಕುವಂತೆ ಮಾಡಬೇಕು ಎಂಬ ಉದ್ದೇಶದಿಂದ ಪಿ.ಎಂ.ಸೂರಜ್ ಪೋರ್ಟಲ್ ಆರಂಭಿಸಲಾಗುತ್ತಿದೆ. ಪೋರ್ಟಲ್ ಮೂಲಕ ಬ್ಯಾಂಕುಗಳಿಗೆ ಉದ್ದಿಮೆ ಸ್ಥಾಪಿಸಲು ಹಾಗೂ ಇತರೆ ಆರ್ಥಿಕ ಚಟುವಟಿಕೆಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಬ್ಯಾಂಕುಗಳು ವಿನಾಕರಣ ಅರ್ಜಿಯನ್ನು ತಿರಸ್ಕರಿಸಲು ಆಗುವುದಿಲ್ಲ.  ಅರ್ಜಿದಾರರು ಅರ್ಜಿ ಸ್ಥಿತಿಗತಿ ಮಾಹಿತಿಯನ್ನು ಕೂತಲ್ಲಿಯೇ ಪಡೆಯಬಹುದಾಗಿದೆ. ರಿಯಾಯಿತಿ, ಕಡಿಮೆ ಬಡ್ಡಿದರ ಸೌಲಭ್ಯಗಳು ಸಹ ನೇರವಾಗಿ ಫಲಾನುಭವಿಗಳಿಗೆ ದೊರಕಲಿವೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.    ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವರ್ಚುಯಲ್ ಮೂಲಕ ಪಿ.ಎಂ.ಸೂರಜ್ ಪೋರ್ಟಲ್ ಉದ್ಘಾಟಿಸಿದರು. ನಂತರ ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಬ್ಯಾಂಕ್ ಸೌಲಭ್ಯ ಪಡೆದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.