ಬ್ಯಾಂಕುಗಳ ರೈತ ವಿರೋಧಿ ನೀತಿಗೆ ರೈತಸಂಘ ಖಂಡನೆ

refocus_ok

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬರುತ್ತಿರುವ ವಿವಿಧ ಭಾಗ್ಯಗಳ ಹಣವನ್ನು ಬ್ಯಾಂಕುಗಳು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದು ತಕ್ಷಣವೇ ಇದನ್ನು ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ಪಟ್ಟಣದ ರೈತಸಂಘದ ಕಛೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಬ್ಯಾಂಕುಗಳ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ರಾಜ್ಯದಲ್ಲಿ ತೀವ್ರವಾದ ಬರಗಾಲವಿದೆ. ನೀರು ಮತ್ತು ವಿದ್ಯುತ್ ಕೊರತೆಯಿಂದ ರೈತರ ಬದುಕು ಬೀದಿಗೆ ಬಿದ್ದಿಗೆ. ಇಂತಹ ಕಠಿಣ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ವೃದ್ದಾಪ್ಯ ವೇತನ, ವಿಧವಾ ವೇತನ, ಕಿಸಾನ್ ಯೋಜನೆ, ನರೇಗಾ ಕೂಲಿ, ಹಾಲಿನ ಸಹಾಯ ಧನ, ಭಾಗ್ಯಲಕ್ಷ್ಮಿ ಯೋಜನೆಯ ಹಣ ಸೇರಿದಂತೆ ವಿವಿಧ ಸಹಾಯ ಧನ ಯೋಜನೆಗಳು ರೈತರ ಬದುಕಿಗೆ ಗುಟುಕು ಆಸರೆಯಾಗಿವೆ. ಆದರೆ ಬ್ಯಾಂಕುಗಳು ಸರ್ಕಾರ ವಿವಿಧ ಯೋಜನೆಯ ಹಣವನ್ನು ರೈತರ ಖಾತೆಗೆ ಜಮೆ ಮಾಡದೆ ಮುಟ್ಟುಗೋಲು ಹಾಕಿಕೊಂಡು ಅವರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ. ಸರ್ಕರದ ಯಾವುದೇ ಯೋಜನೆಗಳ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳದೆ ಫಲಾನುಭವಿಗಳ ಖಾತೆಗೆ ಕಡ್ಡಾಯವಾಗಿ ಜಮೆ ಮಾಡುವಂತೆ ಆರ್.ಬಿ.ಐ ನಿರ್ದೇಶನವಿದ್ದರೂ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕುಗಳು ಆರ್.ಬಿ.ಐ ಆದೇಶವನ್ನು ಪಾಲಿಸದೆ ಆರ್.ಬಿ.ಐ ಗೆ ಸೆಡ್ಡು ಹೊಡೆದು ನಿಂತಿವೆ ಎಂದು ದೂರಿರುವ ರೈತ ಮುಖಂಡರು ರೈತರ ಹಿತ ದೃಷ್ಠಿಯಿಂದ ತಕ್ಷಣವೇ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳು ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ಕರೆದು ಮುಟ್ಟುಗೋಲು ಹಾಕಿಕೊಂಡಿರುವ ಫಲಾನುಭವಿಗಳ ಹಣವನ್ನು ವಾಪಸ್ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ನಾಡಿನ ಎಲ್ಲಾ ರಾಜಕೀಯ ಪಕ್ಷಗಳು ರೈತರ ಹಿತವನ್ನು ರಕ್ಷಿಸುವಲ್ಲಿ ವಿಫಲವಾಗಿವೆ. ಸರ್ಕಾರದ ಯೋಜನೆಗಳ ಹಣವನ್ನೇ ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ಯೋಜನೆಗಳ ಲಾಭವನ್ನೆ ಜನರಿಂದ ಕಿತ್ತುಕೊಳ್ಳುತ್ತಿದ್ದರೂ ಆಳುವ ಸರ್ಕಾರಗಳಾಗಲೀ ಅಥವಾ ವಿರೋಧ ಪಕ್ಷಗಳಾಗಲೀ ಧ್ವನಿಯೆತ್ತಿ ಜನರ ನೆರವಿಗೆ ನಿಲ್ಲುತ್ತಿಲ್ಲ. ಬ್ಯಾಂಕುಗಳ ಸಾಲ ನೀತಿಯಿಂದ ಸರ್ಕಾರದ ಜನಪರ ಯೋಜನೆಗಳು ವಿಫಲವಾಗುತ್ತಿದ್ದರೂ ಸರ್ಕಾರ ಇದರತ್ತ ತಿರುಗಿ ನೋಡುತ್ತಿಲ್ಲ.
ಚುನಾವಣೆಯ ಗೆಲುವಿಗಾಗಿ ಹತ್ತು ಹಲವಾರಿ ಗಿಮಿಕ್ ಮಾಡುವ ರಾಜಕೀಯ ಪಕ್ಷಗಳು ನೊಂದ ಫಲಾನುಭವಿಗಳ ನೆರವಿಗೆ ನಿಲ್ಲುತ್ತಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿರುವ ರೈತ ಮುಖಂಡರು ಬ್ಯಾಂಕುಗಳ ಜನ ವಿರೋಧಿ ನೀತಿಯ ವಿರುದ್ದ ರೈತಸಂಘ ಹೋರಾಟಕ್ಕಿಳಿಯಲಿದೆ. ಯೋಜನೆಗಳ ಹಣವನ್ನು ಸಾಲಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಫಲಾನುಭವಿಗಳು ತಾಲೂಕು ರೈತಸಂಘವನ್ನು ಸಂಪರ್ಕಿಸಿದರೆ ರೈತಸಂಘ ಅವರ ನೆರವಿಗೆ ನಿಲ್ಲಲಿದೆ ಎಂದಿದ್ದಾರೆ.