ಬ್ಯಾಂಕುಗಳ ಮುಂದೆ ಕಾಣೆಯಾದ ಸಾಮಾಜಿಕ ಅಂತರ.

ಮರಿಯಮ್ಮನಹಳ್ಳಿ, ಜೂ.08: ಕೋರೋನಾ ಸೋಂಕಿನ ತೀವ್ರತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಿರುವ ಲಾಕ್‌ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಜನರು ಬ್ಯಾಂಕುಗಳ ಮುಂದೆ ನಾ ಮುಂದು ತಾ ಮುಂದು ಎಂದು ಸಾಮಾಜಿಕ ಅಂತರ ಮರೆತು ಗುಂಪಾಗಿ ನಿಂತಿರುವುದು ನಾಗರಿಕರನ್ನು ಕಳವಳಕ್ಕೀಡು ಮಾಡಿದೆ.
ಮರಿಯಮ್ಮನಹಳ್ಳಿ ಪಟ್ಟಣದ ವಿವಿಧ ಬ್ಯಾಂಕುಗಳ ಮುಂದೆ ಜನರು ತಮ್ಮ ಹಣಕಾಸಿನ ವ್ಯವಹಾರ ಮಾಡಲು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ನಿಂತಿರುವುದು ಕಂಡುಬಂತು. ಅಲ್ಲದೇ ಬ್ಯಾಂಕ್ ಸಿಬ್ಬಂದಿ ಜನ ಜಂಗುಳಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರೂ ಜನರು ಸಿಬ್ಬಂದಿಗಳ ಮಾತು ಕೇಳದೇ ಸರತಿ ಸಾಲಿನಲ್ಲೂ ನಿಲ್ಲದೇ ಗುಂಪಾಗಿ ನಿಂತಿರುವುದು ನಾಗರಿಕರಲ್ಲಿ ಕಳವಳಕ್ಕೀಡು ಮಾಡಿದೆ.
ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಲ್ಲಿ ನಿಧಾನಗತಿಯಲ್ಲಿ ಸೋಂಕಿನ ಪ್ರಕರಣಗಳು ತಹಬದಿಗೆ ಬಂದಿದ್ದು ನಾಗರಿಕರು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಬ್ಯಾಂಕುಗಳು, ದಿನಸಿ ಅಂಗಡಿಗಳು, ಮದ್ಯದಂಗಡಿಗಳು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ ಇಲ್ಲದೇ ಸಾಮಾಜಿಕ ಅಂತರ ಮರೆತು ವ್ಯಾಪಾರ ಮಾಡುವುದನ್ನು ಗಮನಿಸಿದರೆ ಮತ್ತೆ ಕೊರೋನಾ ಸೋಂಕು ಮರುಕಳಿಸಿ ಸೋಂಕಿನ ತೀವ್ರತೆ ಹೆಚ್ಚುವುದರಲ್ಲಿ ಸಂಶಯವಿಲ್ಲ ಎನ್ನುವಂತಾಗಿದೆ. ಅಲ್ಲದೇ
ಲಾಕ್‌ಡೌನ್ ನಿಯಮಾವಳಿಗಳಲ್ಲಿನ ಸಡಿಲಿಕೆ ನಿಯಮಾವಳಿಗಳು ಸರಿಯಾಗಿ ಪಾಲನೆ ಮಾಡದಿದ್ದರೇ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಮತ್ತೊಮ್ಮೆ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ ಎಂದು ಕೆಲ ಪ್ರಜ್ಞಾವಂತ ನಾಗರಿಕರ ಅಳಲಾಗಿದೆ.