ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಅಭಿಯಾನ

Kannada Development Board chairman T S Nagabharana. Dr.Vijayalakshmi Balekundri with others to demand use Kannada lounge in banks transactions held in front of Canara Bank J C road in Bengaluru on Tuesday. ಬೆಂಗಳೂರು, ಡಿ. ೨೯- ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಯ ಅಭಿಯಾನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂದಿನಿಂದ ಆರಂಭಿಸಿದ್ದು, ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ನಗರದ ಪ್ರಮುಖ ಬ್ಯಾಂಕ್‌ಗಳಲ್ಲಿ ಕರಪತ್ರ ಹಂಚುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಕಾಯಕ ವರ್ಷಾಚರಣೆ-೨೦೨೦-೨೧ ರ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ಮಾರ್ಗದರ್ಶಿ (ಲೀಡ್ ಬ್ಯಾಂಕ್) ಬ್ಯಾಂಕ್‌ಗಳ ಮುಂಭಾಗದಲ್ಲಿ ಏಕಕಾಲದಲ್ಲಿ ಈ ಅಭಿಯಾನ ನಡೆಸಿತು.
ನಗರದ ಜೆ.ಸಿ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್, ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ಮುಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಸದಸ್ಯರುಗಳಾದ ಡಾ. ಕಿಶೋರ್, ರೋಹಿತ್ ಚಕ್ರತೀರ್ಥ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಇವರುಗಳು ಕನ್ನಡ ಬಳಕೆಯನ್ನು ಉತ್ತೇಜಿಸುವ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ನಂತರ ಬ್ಯಾಂಕ್‌ನ ಎಲ್ಲ ನೌಕರರು ಹಾಗೂ ಗ್ರಾಹಕರಿಗೂ ಕರಪತ್ರಗಳನ್ನು ಹಂಚಿ ಕನ್ನಡ ಬಳಸುವಂತೆ ಹೇಳಿದರು.
ಈ ಅಭಿಯಾನದಲ್ಲಿ ಹಲವು ಕನ್ನಡ ಪರ ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯಿತು.