ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಸಂಯಮದಿಂದ ವರ್ತಿಸುವ ಮೂಲಕ ಸ್ಪಂದಿಸಿ : ಲೀಡ್ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್

ಯಾದಗಿರಿ: ಮೇ , 18:ಬರ ಪರಿಹಾರದ ಹಣ ಸೇರಿದಂತೆ ವೃದ್ಧಾಪ್ಯ ವೇತನ, ವಿಧವಾ ವೇತನ, ಪಿಂಚಣಿ, ಪಿಎಂ ಕಿಸಾನ್ ನೆರವು ಮುಂತಾದವುಗಳನ್ನು ರೈತರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳಬಾರದು ಎಂದು ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಲೋಕೇಶ್ ಅವರು ಜಿಲ್ಲಾ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚಿಸಿದರು.
ನಗರದ ಸ್ಟೇಷನ್ ರಸ್ತೆಯಲ್ಲಿರುವ ಲೀಡ್ ಬ್ಯಾಂಕ್ ಆಫೀಸ್ ನಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳ ವ್ಯವಸ್ಥಾಪಕರೊಂದಿಗೆ ತುರ್ತುಸಭೆ ನಡೆಸಿ ಅವರು ಮಾತನಾಡಿದರು.
ಸರಕಾರವು 2023-24 ನೇ ಸಾಲಿನ ಅವಧಿಯಲ್ಲಿ ಬರಪೀಡಿತವೆಂದು ಬಿಡುಗಡೆಗೊಳಿಸಿದ ರೈತರ ಬ್ಯಾಂಕ್ ಖಾತೆಗೆ ಬರುವ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ ಎಂದು ಆರೋಪ ಕೇಳಿಬರುತ್ತಿದೆ. ಇದು ಬಹಳ ಗಂಭೀರ ವಿಷಯವಾಗಿ ಪರಿಗಣಿಸಲಾಗಿದೆ.
ರೈತರು, ಸಾರ್ವಜನಿಕರು ಬ್ಯಾಂಕಿಗೆ ಬಂದಾಗ ಸಂಯಮದಿಂದ ವರ್ತಿಸುವ ಮೂಲಕ ಸ್ಪಂದಿಸಬೇಕು. ಅವರ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಡಿ.ಬಿ.ಟಿ ಮೂಲಕ ಸಂದಾಯವಾಗುವ ಹಣವನ್ನು ಯಾವುದೇ ಕಾರಣಕ್ಕಾಗಿ ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಏನಾದರೂ ತಾಂತ್ರಿಕ ದೋಷಗಳಿದ್ದರೆ ತಿಳಿವಳಿಕೆ ಮೂಡಿಸಿ ಸಮಸ್ಯೆ ಇತ್ಯರ್ಥಪಡಿಸಲು ಸಹಕಾರ ನೀಡಿ ಎಂದು ಸೂಚಿಸಿದರು.
ಸಾರ್ವಜನಿಕರಿಗೆ ಆರ್ಥಿಕವಾಗಿ ಅಗತ್ಯ ನೆರವು ನೀಡಲು ರಾಜ್ಯ ಹಾಗೂ ಕೇಂದ್ರ ಸರಕಾರವು ಹಲವು ಸಾಲ ಯೋಜನೆಗಳನ್ನು ಜಾರಿಗೆ ತಂದಿವೆ. ಉದಾಹರಣೆಗಾಗಿ ಪಿ.ಎಂ ಸ್ವನಿಧಿ ಸಾಲ ಯೋಜನೆಯಲ್ಲಿ ನಮ್ಮ ಯಾದಗಿರಿ ಜಿಲ್ಲೆಯು ಮೊದಲನೇ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಹೀಗಾಗಿ ಇನ್ನಿತರೇ ಸಾಲ ಯೋಜನೆಗಳಿಗೆ ಅರ್ಜಿಗಳನ್ನು ಬಂದರೆ ಶೀಘ್ರದಲ್ಲಿಯೇ ಅವುಗಳನ್ನು ವಿಲೇಮಾಡಿ ಸಹಕರಿಸಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್.ಬಿ. ಐ ಪ್ರಾದೇಶಿಕ ಕಛೇರಿಯ ಮುಖ್ಯ ವ್ಯವಸ್ಥಾಪಕ ಲೋಯಿಸ್ ಸಿ.ಎಮ್, ಕೆ.ಜಿ.ಬಿ ಕರ್ನಾಟಕ ರಿಜಿನಲ್ ಆಫೀಸರ್ ( ಸಿ.ಎಮ್ ಕ್ರೆಡಿಟ್) ಸುಬೇದಾರ್, ಲೀಡ್ ಬ್ಯಾಂಕ್ ನ ಸಿಬ್ಬಂದಿಗಳಾದ ಕುಮಾರಸ್ವಾಮಿ, ಅಮೀರ್ ಪಟೇಲ್ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.