ಬ್ಯಾಂಕಿಂಗ್ ಸೇವೆ ಅವೈಜ್ಞಾನಿಕ ಸಮಯ ನಿಗದಿ: ಆರೋಪ


ದೇವದುರ್ಗ.ಜೂ.೦೬-ಲಾಕ್‌ಡೌನ್ ಸಮಯದಲ್ಲಿ ಬ್ಯಾಂಕಿಂಗ್ ಕೆಲಸಕ್ಕೆ ನಿಗದಿ ಮಾಡಿದ ಸಮಯ ಅವೈಜ್ಞಾನಿಕ ಎನ್ನುವ ಆರೋಪ ಕೇಳಿಬರುತ್ತಿವೆ. ಬೆಳಗ್ಗೆ ೬ರಿಂದ ೧೦ರವರೆಗೆ ಸಮಯ ನಿಗದಿ ಮಾಡಿದ್ದು, ಮಹಿಳಾ ಉದ್ಯೋಗಿಗಳು, ಹಿರಿಯ ನೌಕರರು ಮಾತ್ರವಲ್ಲ ಗ್ರಾಮೀಣ ಭಾಗದ ಗ್ರಾಹಕರಿಗೂ ತೊಂದರೆಯಾಗುತ್ತಿದೆ.
ಬೆಳಗ್ಗೆ ೬ಗಂಟೆಗೆ ಬ್ಯಾಂಕ್ ಆರಂಭವಾಗುತ್ತಿದ್ದು, ಗ್ರಾಮೀಣ ಭಾಗ ಸೇರಿ ದೂರದ ಬ್ಯಾಂಕ್‌ಗೆ ತೆರಳಲು ನೌಕರರಿಗೆ ಸಮಸ್ಯೆಯಾಗುತ್ತಿದೆ. ನಿಗದಿತ ಸಮಯಕ್ಕೆ ತಲುಪಲು ಬೆಳಗ್ಗೆ ೫ಕ್ಕೆ ಮನೆ ಬಿಡಬೇಕು. ಲಾಕ್‌ಡೌನ್ ಹಿನ್ನೆಲೆ ಬಸ್, ಖಾಸಗಿ ವಾಹನಗಳ ಓಡಾಟವಿಲ್ಲದೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಲು ಆಗುತ್ತಿಲ್ಲ.
ಗ್ರಾಮೀಣ ಭಾಗದ ಶಾಖೆಗಳಿಗೆ ನಗದು ಅಗತ್ಯವಿದ್ದು, ಬೆಳಗ್ಗೆ ೫ಗಂಟೆಗೆ ಹಣ ಸಾಗಣೆ ಮಾಡಬೇಕು. ನಗದುಹಣ ಸಾಗಣೆಗೆ ಭದ್ರತೆ ಸಮಸ್ಯೆಯಾಗಿದೆ. ಗ್ರಾಮೀಣ ಭಾಗದಿಂದ ಪಟ್ಟಣದ ಬ್ಯಾಂಕ್‌ಗೆ ಬರಲು ಗ್ರಾಹಕರಿಗೂ ತೊಂದರೆ ಆಗುತ್ತಿದೆ. ಸಾರಿಗೆ ಸೌಲಭ್ಯ ಇಲ್ಲದ ಕಾರಣ ಗ್ರಾಹಕರು ಬರುವ ವೇಳೆಗೆ ಕ್ಯಾಸ್‌ಕೌಂಟರ್ ೯ಕ್ಕೆ ಕ್ಲೋಸ್ ಆಗುತ್ತದೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮರಳಿ ಹೋಗುವ ಸ್ಥಿತಿಯಿದೆ.
ಬೆಳಗ್ಗೆ ೬ಕ್ಕೆ ಕ್ಯಾಸ್ ಕೌಂಟರ್ ಆರಂಭವಾಗುತ್ತಿದ್ದು, ಗ್ರಾಹಕರಿಲ್ಲದೆ ನೌಕರರು ಖಾಲಿ ಕೂಡಬೇಕು. ೮ಗಂಟೆವರೆಗೆ ಗ್ರಾಹಕರು ಬ್ಯಾಂಕ್ ಕಡೆ ತಲೆಹಾಕುವುದಿಲ್ಲ. ೮ರನಂತರ ಗ್ರಾಹಕರು ಬರುತ್ತಿದ್ದು, ೯ಕ್ಕೆ ಕೌಂಟರ್ ಕ್ಲೋಸ್ ಆಗುವ ಕಾರಣ ಕೆಲಸದ ಒತ್ತಡ ಹೆಚ್ಚುತ್ತಿದೆ. ಅಲ್ಲದೆ ಪಕ್ಕದ ಕೊಪ್ಪಳ ಜಿಲ್ಲೆಯಲ್ಲಿ ಬೆಳಗ್ಗೆ ೮ರಿಂದ ೧೦ರವರೆಗೆ, ಯಾದಗಿರಿ ಜಿಲ್ಲೆಯಲ್ಲಿ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ಬ್ಯಾಂಕ್ ಸಮಯ ನಿಗದಿಮಾಡಲಾಗಿದೆ. ಆದರೆ, ರಾಯಚೂರು ಜಿಲ್ಲೆಯಲ್ಲಿ ಮಾತ್ರ ಅವೈಜ್ಞಾನಿಕ ಸಮಯವಿದೆ ಎನ್ನುವ ಆರೋಪ ಗ್ರಾಹಕರು ಹಾಗೂ ನೌಕರರಿಂದ ಕೇಳಿಬರುತ್ತಿವೆ.
ಸೇವಾ ಕೇಂದ್ರ, ಎಟಿಎಂ ಬಂದ್
ಮುಂಗಾರು ಆರಂಭವಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬ್ಯಾಂಕ್ ಸಮಯ ರೈತರಿಗೆ ತಲೆಬಿಸಿ ಮೂಡಿಸಿದೆ. ಬೀಜ, ಗೊಬ್ಬರ, ಕ್ರಿಮಿನಾಶಕ ಅಂಗಡಿ ಸೇರಿ ಕೃಷಿ ಉಪಕರಣಗಳ ಅಂಗಡಿಗಳು ಬೆಳಗ್ಗೆ ೮ಕ್ಕೆ ಆರಂಭವಾಗುತ್ತಿವೆ. ರೈತರು ೯ಕ್ಕೆ ಪಟ್ಟಣಕ್ಕೆ ಬಂದರೆ, ಅಷ್ಟರಲ್ಲೇ ಬ್ಯಾಂಕ್‌ಗಳು ಕ್ಲೋಸ್‌ಆಗಿರುತ್ತವೆ. ಗ್ರಾಹಕರ ಸೇವಾ ಕೇಂದ್ರ ಆರಂಭಕ್ಕೆ ಅವಕಾಶ ನೀಡಿಲ್ಲ. ಎಟಿಎಂಗಳಲ್ಲಿ ಹಣದ ಕೊರತೆಯಿದೆ. ಕೆಲವು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ರೈತರು ಹಾಗೂ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಹಣ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಕೋಟ್========
ಬ್ಯಾಂಕ್ ಕೆಲಸದ ಸಮಯದ ಬಗ್ಗೆ ದೂರು ಕೇಳಿಬಂದಿದ್ದು, ಗ್ರಾಹಕರು ಹಾಗೂ ನೌಕರರಿಗೆ ತೊಂದರೆಯಾಗುತ್ತಿದೆ. ಸಮಯ ಬದಲಾವಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಎರಡ್ಮೂರು ಸಲ ಮನವಿ ಮಾಡಲಾಗಿದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಣ ಸಾಗಣೆ, ಮಹಿಳಾ ನೌಕರರಿಗೆ ತೊಂದರೆಯಾಗಿದೆ.
| ಬಾಬು ಬಳಗಾನೂರು