ಬ್ಯಾಂಕಿಂಗ್ ಪರೀಕ್ಷೆ ನಿಯಮ ಮರು ಜಾರಿಗೆ ಹೆಚ್‌ಡಿಕೆ ಒತ್ತಾಯ


ಬೆಂಗಳೂರು,ಜೂ.೧೧- ಈ ಬಾರಿಯ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸುತ್ತಿರುವುದಕ್ಕೆ ಸ್ವಾಗತವಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು,ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ನೌಕರಿ ಸಿಗುವಂತೆ ಮಾಡಲು ೨೦೧೪ಕ್ಕೂ ಮುನ್ನಾ ಇದ್ದ ನೇಮಕಾತಿ ನಿಯಮಗಳನ್ನು ಮರು ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಐಬಿಪಿಎಸ್ ನಡೆಸುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರೆಡು ಈ ಬಾರಿ ಕನ್ನಡದಲ್ಲೇ ನಡೆಯಲಿವೆ. ಇದನ್ನು ಸ್ವಾಗತಿಸಿ ಇದಕ್ಕೆ ಕಾರಣರಾದ ಕನ್ನಡದ ಮನಸ್ಸುಗಳನ್ನು ಅಭಿನಂದಿಸುತ್ತೇನೆ. ನಮ್ಮ ಬೇಡಿಕೆ ಇಷ್ಟೇ ಅಲ್ಲ. ಐಬಿಪಿಎಸ್ ನೇಮಕಾತಿ ಕಟ್ಟಳೆಗಳಲ್ಲಿ ಬದಲಾವಣೆಯಾಗಬೇಕು. ಕನ್ನಡಿಗರಿಗೆ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ೨೦೧೪ಕ್ಕೂ ಮುನ್ನಾ ಇದ್ದ ನೇಮಕಾತಿ ನಿಯಮ ಜಾರಿ ಅವಶ್ಯ ಎಂದು ಅವರು ಹೇಳಿದ್ದಾರೆ.
೨೦೧೪ಕ್ಕೂ ಮುನ್ನ ಕರ್ನಾಟಕದಲ್ಲಿ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಗೊತ್ತಿರಬೇಕು ಎಂಬ ನಿಯಮ ಇತ್ತು, ನಂತರ ಇದನ್ನು ತೆಗೆದು ಹಾಕಿ ಕೆಲಸಕ್ಕೆ ಸೇರಿದ ೬ ತಿಂಗಳಲ್ಲಿ ಕನ್ನಡ ಕಲಿಯಬೇಕು ಎಂದು ಹೇಳಲಾಯಿತು. ಇದರಿಂದ ರಾಜ್ಯದ ಬ್ಯಾಂಕುಗಳಲ್ಲಿ ಕನ್ನಡ ತಿಳಿಯದವರೇ ತುಂಬಿದ್ದಾರೆ. ಇದರಿಂದ ಕನ್ನಡಿಗರಿಗೆ ಸಮಸ್ಯೆಗಳು, ಅಪಮಾನಗಳು ಆಗುತ್ತಿವೆ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಈ ಬಾರಿ ಐಬಿಪಿಎಸ್ ನಡೆಸುತ್ತಿರುವ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಒಂದು ಹುದ್ದೆಯೂ ಇಲ್ಲ. ರಾಜ್ಯದ ಪ್ರತಿ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಕೆವಿಜಿ ಮತ್ತು ಕೆವಿಜಿಬಿ ಬ್ಯಾಂಕುಗಳಿವೆ. ಆದರೂ ಒಂದು ಹುದ್ದೆ ಇಲ್ಲದಿರುವುದು ಅಶ್ಚರ್ಯ ತಂದಿದೆ. ಹುದ್ದೆಗಳನ್ನು ಮರು ನಿಗದಿ ಮಾಡಿ ಹೊಸದಾಗಿ ಅರ್ಜಿ ಆಹ್ವಾನಿಸಬೇಕು. ಈ ಸಂಬಂಧ ರಾಜ್ಯದ ಎಲ್ಲರೂ ದನಿ ಎತ್ತಿ, ಕನ್ನಡಿಗ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.