ಬೌದ್ಧ ಧರ್ಮವು ಕೇವಲ ಒಂದು ಧರ್ಮವಲ್ಲ, ಅದೊಂದು ಜೀವನ ಮಾರ್ಗಃ ಪೂಜ್ಯ ಭಂತೆ ಆನಂದ ಮಹಾಥೇರೊ

ವಿಜಯಪುರ ನ. 8-ಬೌದ್ಧ ಧರ್ಮವು ಕೇವಲ ಒಂದು ಧರ್ಮವಲ್ಲ, ಅದೊಂದು ಜೀವನ ಮಾರ್ಗ. ಅದು ಮನುಷ್ಯನನ್ನು ಸುಖಿ ಜೀವನದತ್ತ ಕೊಂಡೊಯ್ಯುವ ಸಾಧನ ಎಂದು ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಮುಖ್ಯಸ್ಥರಾದ ಪೂಜ್ಯ ಭಂತೆ ಆನಂದ ಮಹಾಥೇರೊ ಅವರು ಹೇಳಿದರು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಮತ್ತು ಬುದ್ಧವಿಹಾರ ನಿರ್ಮಾಣ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ನಗರದ ಸಾರಿಪುತ್ರ ಬುದ್ಧವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ವರ್ಷಾವಾಸ ಸಮಾರೋಪ ಸಮಾರಂಭ ಮತ್ತು ಪೂಜ್ಯ ಭಿಕ್ಖು ಸಂಘಕ್ಕೆ ಚೀವರದಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಭಗವಾನ ಬುದ್ಧರು ಮೈತ್ರಿಯನ್ನು ಬೋಧಿಸಿದ್ದಾರೆ. ಮನುಷ್ಯರು ಮಾತ್ರವಲ್ಲ, ಸಕಲ ಜೀವಿಗಳ ಬಗ್ಗೆ ಕರುಣೆಯನ್ನು ತೋರಬೇಕು, ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಬೇಕು, ಪ್ರೀತಿಯಿಂದ ಮಾತ್ರ ದ್ವೇಷವನ್ನು ಗೆಲ್ಲಬಹುದು ಎಂಬುದನ್ನು ಬೋಧಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಪಂಚಶೀಲಗಳನ್ನು ಪಾಲಿಸುವ ಮೂಲಕ ಶೀಲವಂತ ಸಮಾಜವನ್ನು ಕಟ್ಟಬೇಕು ಎಂದು ಅವರು ಹೇಳಿದರು.
ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮವು ತನ್ನ ಸಂಸ್ಕøತಿಯ ಮೂಲಕ ಇಡೀ ವಿಶ್ವವನ್ನು ವ್ಯಾಪಿಸಿದ್ದು ಭಾರತದ ಗೌರವವನ್ನು ಹೆಚ್ಚಿಸಿದೆ ಎಂದು ಹೇಳಿದ ಅವರು ಭಗವಾನ್ ಬುದ್ಧರಿಂದಲೇ ಭಾರತವು ವಿಶ್ವಗುರು ಎನಿಸಿಕೊಂಡಿದೆ ಎಂದು ಹೇಳಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನೇ ಏಕೆ ಆಯ್ದುಕೊಂಡರು ಎಂಬುದಕ್ಕೆ ಕಾರಣ ಬಹುಮುಖ್ಯವಾಗಿ ಬೌದ್ಧ ಧರ್ಮ ಮಾತ್ರ ಭಾರತವನ್ನು ಕಾಪಾಡಬಲ್ಲದು ಎಂಬುದನ್ನು ಅವರು ಅರಿತಿದ್ದರು. ಒಂದು ವೇಳೆ ಬಾಬಾಸಾಹೇಬರು ಬೇರೆ ಧರ್ಮವನ್ನು ಸ್ವೀಕರಿಸಿದ್ದರೆ ಭಾರತವು ಮತ್ತೊಮ್ಮೆ ಇಬ್ಭಾಗವಾಗುತ್ತಿತ್ತು ಎಂದು ಹೇಳಿದ ಆನಂದ ಭಂತೇಜಿ ಅವರು ಭಾರತಕ್ಕೆ ಅಂಟಿಕೊಂಡ ಜಾತಿ ವ್ಯವಸ್ಥೆಯ ಕಲಂಕವನ್ನು ತೊಡೆಯುವ ಶಕ್ತಿ ಬೌದ್ಧ ಧರ್ಮಕ್ಕಿದೆ. ಮನುಷ್ಯ ಮನುಷ್ಯರಲ್ಲಿ ದ್ವೇಷ ಹುಟ್ಟಿಸುವ ಜಾತಿ ವ್ಯವಸ್ಥೆಯ ನಿರ್ಮೂಲನೆ ಮಾಡುವ ಶಕ್ತಿ ಬೌದ್ಧ ಧರ್ಮಕ್ಕಿದೆ ಎಂದು ಹೇಳಿದರು.
ಚಾಮರಾಜನಗರದ ನಿಯೋಜಿತ ನಳಂದ ಬೌದ್ಧ ವಿಶ್ವವಿದ್ಯಾಲಯದ ಪೂಜ್ಯ ಭಂತೆ ಬೋಧಿದತ್ತ ಥೇರೊ ಅವರು ಮಾತನಾಡಿ, ಭಾರತವನ್ನು ಬೌದ್ಧಮಯ ಮಾಡುವ ಮೂಲಕ ಪ್ರಬುದ್ಧ ಭಾರತದ ನಿರ್ಮಾಣ ಮಾಡುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕೊಳ್ಳೆಗಾಲ ಜೇತವನ ಬುದ್ಧವಿಹಾರದ ಪೂಜ್ಯ ಭಂತೆ ಮನೋರಕ್ಖಿತ, ಎಚ್.ಡಿ.ಕೋಟೆಯ ಸಾರನಾಥ ಬುದ್ಧವಿಹಾರದ ಪೂಜ್ಯ ಗೌತಮಿ ಮಾತಾಜಿ, ವಿಶ್ವ ಬೌದ್ಧ ಭಿಕ್ಖು ಮಹಾಸಂಘದ ಪೂಜ್ಯ ಭಂತೆ ಸಂಘಪಾಲ ವೇದಿಕೆಯ ಮೇಲಿದ್ದರು.
ಮಾಜಿ ಶಾಸಕರಾದ ಪ್ರೊ. ರಾಜು ಆಲಗೂರ, ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಕಾರ್ಯದರ್ಶಿ ವೆಂಕಟೇಶ ವಗ್ಯಾನವರ, ಜಿಲ್ಲಾಧ್ಯಕ್ಷ ಬಸವರಾಜ ಚಲವಾದಿ, ಉಪಾಧ್ಯಕ್ಷೆ ಶ್ರೀಮತಿ ಭಾರತಿ ಹೊಸಮನಿ, ಪದಾಧಿಕಾರಿಗಳಾದ ಕೆ.ಎಂ. ಶಿವಶರಣ, ಸೂರ್ಯಕಾಂತ ಬಾಣಿಕೋಲ, ಸುರೇಶ ಚೂರಿ ವಕೀಲರು, ಸುಭಾಸ ಚಲವಾದಿ, ದಿಲೀಪ ಯಂಭತ್ನಾಳ, ದಿಲೀಪ ಚಲವಾದಿ, ಶಿವಪ್ಪ ಹೊಸಮನಿ, ಸಂಘರ್ಷ ಹೊಸಮನಿ, ದೇವೇಶ ಮೂಲಿಮನಿ, ಶಿವಾನಂದ ಸಂದಿಮನಿ, ರೋಹಿತ ಮಲಕನ್ನವರ, ಭಾಗ್ಯಶ್ರೀ ವಗ್ಯಾನವರ, ರೇಣುಕಾ ಶಹಾಪುರ, ಸವಿತಾ ದೊಡಮನಿ, ಶಾರದಾ ಹೊಸಮನಿ, ಸಿದ್ದಮ್ಮ ಚಲವಾದಿ, ಸುಜಾತಾ ಚಂಚಲಕರ, ಮುಕ್ತಾಬಾಯಿ ಚಲವಾದಿ, ಶೋಭಾ ಚಲವಾದಿ, ಕಾಶೀಬಾಯಿ ಬಾಣಿಕೋಲ, ಬುದ್ಧವಿಹಾರ ನಿರ್ಮಾಣ ಸಮಿತಿಯ ಪದಾಧಿಕಾರಿಗಳಾದ ಸಾಬು ಚಲವಾದಿ, ಮನೋಜ ಕೋಟ್ಯಾಳಕರ, ಸಂಜ್ಯೋತ ಔದಿ, ಶಶಿಕಾಂತ ಹೊನವಾಡಕರ ಸೇರಿದಂತೆ ನೂರಾರು ಉಪಾಸಕ-ಉಪಾಸಿಕೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಶಹಾಪುರ ಸ್ವಾಗತಿಸಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ನಿರ್ದೇಶಕರಾದ ಮಹೇಶ ಕ್ಯಾತನ್ ವಂದಿಸಿದರು.