ಬೌದ್ಧಿಕ ವಿಕಾಸದ ಜೊತೆಗೆ ನೈತಿಕ ಪ್ರಜ್ಞೆ ಇರಲಿ

ಸಾಣೇಹಳ್ಳಿ, ಮಾ.30; ಗುರುವಾದವರ ರೀತಿ-ನೀತಿ ಚೆನ್ನಾಗಿರಬೇಕು, ನಡೆ-ನುಡಿ ಒಂದೇ ಆಗಿರಬೇಕು. ಅವರಲ್ಲಿ ಬೌದ್ಧಿಕ ವಿಕಾಸದ ಜೊತೆಗೆ ನೈತಿಕ ಪ್ರಜ್ಞೆಯೂ ಇರಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು
 ಸ್ಥಳೀಯ ಎಸ್ ಎಸ್ ರಂಗಮಂದಿರದಲ್ಲಿ ಹೊಸದುರ್ಗ ತಾಲ್ಲೂಕಿನ ಕ್ಲಷ್ಟರ್ ಮಟ್ಟದ ಗುರುಸ್ಪಂದನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ  ಮಾತನಾಡಿದ ಅವರು ಶಿವನ ಸಾಕ್ಷಾತ್ಕಾರ ಪಡೆಯಲು ಗುರುವಿನ ಮಾರ್ಗದರ್ಶನ ಅತ್ಯಗತ್ಯವೆಂದು ಬಸವಣ್ಣನವರು ಹೇಳಿದ್ದಾರೆ.  ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಾಥಮಿಕ ಶಿಕ್ಷಕರ ಪಾತ್ರ ಮಹತ್ತರವಾದುದು. ವಿಷಯ ವಿದ್ಯಾರ್ಥಿಗಳ ಮನಸ್ಸನ್ನು ಮುಟ್ಟಲು ಶಿಕ್ಷಕನ ಧ್ವನಿಯ ಏರಿಳಿತ ಮತ್ತು ಸೂಕ್ತ ಆಂಗಿಕ ಅಭಿನಯ ಹೆಚ್ಚು ಪರಿಣಾಮಕಾರಿ. ಈ ಹಿನ್ನೆಲೆಯಲ್ಲಿ ಶಿಕ್ಷಕರು ರಂಗಶಿಕ್ಷಣ ಪಡೆದುಕೊಳ್ಳಬೇಕು. ಕೇವಲ ಹೆಸರಿಗೆ ಗುರುವಾಗದೆ ಆತನ ಆಂತರಿಕ ಮತ್ತು ಬಾಹ್ಯ ಚರ್ಯೆಗಳು ಗುರುವಿನ ಗುರುತ್ವವನ್ನು ಎತ್ತಿ ಹಿಡಿಯುವಂತಿರಬೇಕು. ಶಿಕ್ಷಕರು ವೇತನಕ್ಕಾಗಿ ಕೆಲಸ ಮಾಡದೆ; ಮಕ್ಕಳು ಸರಿಯಾಗಿ ಗ್ರಹಿಸುವಂತೆ ಕೆಲಸ ಮಾಡಬೇಕು. ಅಧಿಕಾರಿಗಳ ಮಾರ್ಗದರ್ಶನ ಸಲಹೆ ಸೂಚನೆಗಳನ್ನೂ ಮೀರಿದಂತೆ ಶಿಕ್ಷಕ ಸೃಜನಶೀಲನಾಗಿರಬೇಕು. ಇಂದಿನ ಮಕ್ಕಳು ಶಿಕ್ಷಕರಿಗಿಂತ ಮಕ್ಕಳೇ ಹೆಚ್ಚು ಬುದ್ಧಿವಂತರಿದ್ದಾರೆ ಎನ್ನುವುದನ್ನು ಮರೆಯಬಾರದು. ತಂತ್ರಜ್ಞಾನದಲ್ಲಿ ಶಿಕ್ಷಕರಿಗಿಂತ ಮಕ್ಕಳೇ ಮುಂದಿದ್ದಾರೆ. ವಿದ್ಯಾರ್ಥಿಗಳ ತಲೆಯ ಮೇಲೆ ಮೊಟುಕದೆ; ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಶಿಕ್ಷಕ ಸದಾ ಉತ್ಸಾಹಿ, ಚಲನಶೀಲನಾಗಿರಬೇಕು. ಇದು ವಿದ್ಯಾರ್ಥಿಗಳ ಮೇಲೆ ಸತ್ಪರಿಣಾಮ ಬೀರುವುದು. ಗುರುಸ್ಪಂದನ ಒಂದು ದಿನ ನಡೆಯದೆ; ನಿರಂತರವಾಗಿ ನಡೆಯಬೇಕು. ಈ ಕಾರ್ಯವನ್ನು ಯಶಸ್ವಿಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ಮತ್ತು ಕಛೇರಿಯ ಸಿಬ್ಬಂಧಿ ಅಭಿನಂದನಾರ್ಹರು. ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬ ಶಿಕ್ಷಕರು ಯಾವುದೇ ಗೊಂದಲ, ಗಾಬರಿಯಿಲ್ಲದೆ ಹಾಕಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ಮಾತನಾಡಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದೇ ಗುರುಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರಾಥಮಿಕ ಶಾಲೆಗಳ, ಶಿಕ್ಷಕರ ಸಂಖ್ಯೆ ಅತಿ ಹೆಚ್ಚು. ಈ ಶಿಕ್ಷಕರು ಸರಿಯಾಗಿ ಕೆಲಸ ಮಾಡಲು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿಳಂಬವಿಲ್ಲದೆ, ಕಛೇರಿಗೆ ಅಲೆದಾಡಿಸದೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ದೇಶದ ಭವಿಷ್ಯ ನಿಂತಿರುವುದೇ ಶಿಕ್ಷಕರು ನೀಡುವ ಶಿಕ್ಷಣದ ಮೇಲೆ ಎಂದರು. ಚಿತ್ರದುರ್ಗ ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ ಎಸ್ ಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹೊಸದುರ್ಗ ಸರಕಾರಿ ನೌಕರ ಸಂಘದ ಅಧ್ಯಕ್ಷ ಎಂ ಆರ್ ಶಾಂತಪ್ಪ, ಸಮನ್ವಯ ಶಿಕ್ಷಣಾಧಿಕಾರಿ ಸಿ ಮೌನೇಶ್, ಶಿಕ್ಷಕರ ಸಂಘದ ನಿರ್ದೇಶಕ ನಾಗಪ್ಪ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್ ಇದ್ದರು.