ಬೌದ್ಧಿಕ ವಿಕಲಚೇತನ ವ್ಯಕ್ತಿಗಳಿಗಾಗಿ ತಪಾಸಣಾ ಶಿಬಿರ

ಧಾರವಾಡ, ಮೇ.23: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಸಂಸ್ಥೆಯ ಸಭಾಗಂಣದಲ್ಲಿ ಬೌದ್ಧಿಕ ವಿಕಲಚೇತನ ವ್ಯಕ್ತಿಗಳಿಗೆ ತರಬೇತಿ, ಕಲಿಕಾ, ಸಾಮಾಗ್ರಿಗಳು (ಟಿ.ಎಲ್.ಎಮ್.ಕಿಟ್) ಒದಗಿಸುವ ಸಲುವಾಗಿ ತಪಾಸಣಾ ಶಿಬಿರವನ್ನು ಇತ್ತೀಚಿಗೆ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಸಂಯುಕ್ತ ಪ್ರಾದೇಶಿಕ ಕೆಂದ್ರ (ದಿವ್ಯಾಂಗ ಜನರಿಗಾಗಿ) ದಾವಣಗೆರೆ, ಡಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಜಿ ವಿಭಾಗ, ಸಮುದಾಯ ಆಧಾರಿತ ಆರೋಗ್ಯ ಕಾರ್ಯಕ್ರಮಗಳ ಘಟಕ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ (ಎಸ್.ವ್ಹಿ.ವಾಯ್.ಎಮ್) ಧಾರವಾಡದ ವತಿಯಿಂದ ಈ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ತಪಾಸಣಾ ಶಿಬಿರವನ್ನು ಧಾರವಾಡ ಡಿಮ್ಹಾನ್ಸ್ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿಯ ಅಧ್ಯಕ್ಷರಾದ ಆರ್.ರೇಣುಕೆ ಅವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ಬೌದ್ಧಿಕ ವಿಕಲಚೇತನ ಸಮಸ್ಯೆಯನ್ನು ಹೊಂದಿರುವ ವಿಶೇಷ ಮಕ್ಕಳನ್ನು ಅಥವಾ ವ್ಯಕ್ತಿಗಳನ್ನು ಯಾವುದೇ ತಾರತಮ್ಯ ಮಾಡದೇ ಪ್ರೀತಿಯಿಂದ ಕಾಳಜಿ ಮಾಡಬೇಕು. ಬೌದ್ಧಿಕ ವಿಕಲಚೇತನ ಹೊಂದಿದ ವ್ಯಕ್ತಿಗಳನ್ನು ಗೌರವದೊಂದಿಗೆ ಮತ್ತು ಸಮುದಾಯದಲ್ಲಿ ಇತರರಂತೆ ಸಮಾನವಾಗಿ ಕಾಣಬೇಕು ಎಂದು ತಿಳಿಸಿದರು.

ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸರಸ್ವತಿ ತೆನಗಿ ಮಾತನಾಡಿ, ಡಿಮ್ಹಾನ್ಸ್ ಸಂಸ್ಥೆಯ ವತಿಯಿಂದ ಹಲವಾರು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ವಿಕಲಚೇತನ ಹೊಂದಿದ ಮಕ್ಕಳ ಸೇವೆ ದೇವರ ಸೇವೆಯಿದ್ದ ಹಾಗೆ ಮತ್ತು ಇವರ ಸೇವೆ ಮಾಡುವುದು ದೇವರಿಗೆ ಮುಟ್ಟುತ್ತದೆಯೆಂದು ತಿಳಿಸಿದರು.

ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್‍ನ ಹಿರಿಯ ವ್ಯವಸ್ಥಾಪಕ ಡಾ.ಮೋಹನ್ ಕುಮಾರ ಥಂಬದ, ಡಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಗಾಯತ್ರಿ ಹೆಗಡೆ ಅವರು ಮಾತನಾಡಿದರು.

ಸಂಯುಕ್ತ ಪ್ರಾದೇಶಿಕ ಕೆಂದ್ರ (ದಿವ್ಯಾಂಗ ಜನರಿಗಾಗಿ) ದಾವಣಗೆರೆಯ ಕ್ಲಿನಿಕಲ್ ಅಸಿಸ್ಟಂಟ್ ಮತ್ತು ಸಂಯೋಜಕರಾದ ರಾಜು .ಟಿ. ಅವರು ವಿಶೇಷ ಉಪನ್ಯಾಸ ನೀಡಿದರು. ವಿಕಲಚೇತನ ವ್ಯಕ್ತಿಗಳಿಗೆ ಇರುವ ಸರಕಾರಿ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಧಾರವಾಡ ಜಿಲ್ಲೆಯ ವಿವಿಧ ಸ್ಥಳಗಳಿಂದ ಈ ಶಿಬಿರಕ್ಕೆ 160 ಕ್ಕೂ ಹೆಚ್ಚು ಬೌದ್ದಿಕ ವಿಕಲಚೇತನ ವ್ಯಕ್ತಿಗಳು ಅವರ ಆರೈಕೆದಾರರ ಜೊತೆ ಈ ಎರಡು ದಿನಗಳ ಶಿಬಿರದಲ್ಲಿ ಹಾಜರಿದ್ದರು.

ಈ ತಪಾಸಣಾ ಶಿಬಿರದಲ್ಲಿ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿಜಯಕುಮಾರ ಹಿರೇಮಠ ಅವರು ಉಪಸ್ಥಿತರಿದ್ದರು. ಕ್ಲಿನಿಕಲ್ ಸೈಕಾಲಜಿ ವಿಭಾಗದದ ಎಂ.ಫೀಲ್ ವಿದ್ಯಾರ್ಥಿನಿಯರಾದ ದೀಪಾ, ಸಂಕಲ್ಪ, ಚೈತ್ರಾ, ಶ್ರೀನಿಧಿ, ಸುಷ್ಮಾ ಜೈನ್ ಮತ್ತು ಎಂ.ಎಸ್ಸಿ ಇನ್ ಕ್ಲಿನಿಕಲ್ ಸೈಕಾಲಜಿ ವಿಭಾಗದ ವಿದ್ಯಾರ್ಥಿನಿಯರಾದ ಶ್ರೇಯಾ, ವೀಣಾ, ರಾಘವೇಣಿ, ಅರ್ಪಿತಾ ಇವರು ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು.

ಡಿಮ್ಹಾನ್ಸ್ ಸೈಕಿಯಾಟ್ರಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ರಾಘವೇಂದ್ರ ನಾಯಕ್, ಎಸ್.ವ್ಹಿ.ವಾಯ್.ಎಮ್ ಸಂಸ್ಥೆಯ ಹೇಮಾ, ಸುಹಾನಾ ಚೌವಾಣ್ ಮತ್ತು ಕುಮಾರ್ ಹಾಗೂ ಡಿಮ್ಹಾನ್ಸ್ ಸಂಸ್ಥೆಯ ಸಿಬ್ಬಂದಿ ಪ್ರವೀಣ್ ಭಾಗವಹಿಸಿದ್ದರು. ಆರೂಢ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ಹೂಗಾರ ಮತ್ತು ಧಾರವಾಡದ ಮಮತಾ ಬುದ್ದಿಮಾಂದ್ಯ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥರು ಉಪಸ್ಥಿತರಿದ್ದರು. ಅರ್ಪಿತಾ ಅವರು ಪ್ರಾರ್ಥಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತ ಮಾಡಿದರು.