ಸಂಜೆವಾಣಿ ವಾರ್ತೆ
ದಾವಣಗೆರೆ.ಅ.೩೧: ದೇಶದ ಪ್ರಗತಿಯು ಆಯಾ ದೇಶದ ಕಾರ್ಯಾಂಗದ ಪ್ರಾಮಾಣಿಕತೆ, ನಿಷ್ಟೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.ದಾವಣಗೆರೆಯ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಲಾದ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತದ ಜನರ ಶ್ರಮದ ತೆರಿಗೆ,ಕಂದಾಯ ಮುಂತಾದ ಕೊಡುಗೆಗಳಿಂದಾಗಿ ಸಾರ್ವಜನಿಕ ಆಡಳಿತ ಸಾಧ್ಯವಾಗಿದೆ.ಸಾರ್ವಜನಿಕ ಜೀವನದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರಾದ ನಾವುಗಳು ಜನರಿಗೆ, ಈ ದೇಶಕ್ಕೆ ನಿಷ್ಟರಾಗಿ,ಪ್ರಾಮಾಣಿಕ ಸೇವೆಗೆ ಬದ್ಧರಾಗಿರಬೇಕು. ಆದ್ದರಿಂದ ಭ್ರಷ್ಟಾಚಾರವನ್ನು ಮೂಲೋತ್ಥಾಟನೆ ಮಾಡಲು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆಯನ್ನು ಮೆರೆಯೋಣ ಎಂದು ಕರೆ ನೀಡಿದರು.ಈ ದೇಶವೇ ನನ್ನ ಕುಟುಂಬ, ಸೇವೆಯೇ ನಮ್ಮ ಮುಖ್ಯ ಧ್ಯೇಯವಾಗಬೇಕು. ನ್ಯಾಯ ಕೋರಿ ಬರುವ ಬಡ ಕಕ್ಷಿದಾರರಿಗೆ ಯಾವುದೇ ವಿಳಂಬ ಮಾಡದೆ ಪಾರದರ್ಶಕವಾದ ಜನಸ್ನೇಹಿ ಆಡಳಿತ ನೀಡೋಣ. ಭ್ರಷ್ಟಾಚಾರವನ್ನು ವಿರೋಧಿಸೋಣ, ರಾಷ್ಟçಕ್ಕೆ ಬದ್ಧರಾಗಿರೋಣ ಎಂಬ ಘೋಷವಾಕ್ಯದಂತೆ ನಾವು ನಮ್ಮ ಜೀವನದಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಳ್ಳೋಣ ಎಂದರು.ಕೇವಲ ಅಕ್ರಮವಾಗಿ ಹಣ,ವಸ್ತುರೂಪಗಳಲ್ಲಿ ಅಕ್ರಮ ಸಂಪಾದನೆಯಷ್ಟೇ ಭ್ರಷ್ಟಾಚಾರದಲ್ಲ. ನಾವು ನಮ್ಮ ನಮ್ಮ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡಿದರೂ ಸಹ ಭ್ರಷ್ಟಾಚಾರವೇ ಆಗುತ್ತದೆ. ಹೀಗಾಗಿ ಭ್ರಷ್ಟಾಚಾರದ ವ್ಯಾಖ್ಯಾನವೂ ಸಹ ಬದಲಾಗಬೇಕಿದೆ. ಇಂತಹ ಬೌದ್ಧಿಕ ಭ್ರಷ್ಟಾಚಾರವು ಅತ್ಯಂತ ಅಪಾಯಕಾರಿ ಅಷ್ಟೇ ಅಲ್ಲ, ದೇಶದ ಏಳಿಗೆಗೆ ಸಹ ಮಾರಕ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಾಜರಿದ್ದ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳು, ಮುಖ್ಯ ಆಡಳಿತಾಧಿಕಾರಿ, ಸಿಬ್ಬಂದಿಗಳು ಪ್ರತಿಜ್ಞೆ ಸ್ವೀಕರಿಸಿದರು. ರಾಜೇಶ್ವರಿ ಎನ್.ಹೆಗಡೆ ಪ್ರತಿಜ್ಞಾವಿಧಿ ಬೋಧಿಸಿದರು.