ಬೋಸ್ ಆರೋಪಕ್ಕೆ ದಾಖಲೆ ನೀಡಲಿ: ಆರ್.ಅರ್ಜುನ್ ಒತ್ತಾಯ

ತಿ.ನರಸೀಪುರ. ಮೇ.29: ಪ್ರಚಾರದ ಭರದಲ್ಲಿ ವಿನಾಕಾರಣ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ನಡೆಯನ್ನು ಖಂಡಿಸಿರುವ ಚಿತ್ರನಟರೂ ಆಗಿರುವ ಪುರಸಭಾ ಸದಸ್ಯ ಆರ್.ಅರ್ಜುನ್ ಅವರು ಮಾಡಿರುವ ಆರೋಪಕ್ಕೆ ದಾಖಲೆ ನೀಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೆಡಿಕಲ್ ಕಿಟ್ ನೀಡುವ ಕಾರ್ಯಕ್ರಮದ ವೇಳೆ ಬಿಜೆಪಿ ಆಡಳಿತ ಇರುವ ಪ್ರಸಕ್ತ ಸಂಧರ್ಭದಲ್ಲಿ ಪಟ್ಟಣದ ಆಸ್ಪತ್ರೆಯಲ್ಲಿ ಪ್ಯಾರಾಸಿಟಮಲ್ ಸಹ ಮಾತ್ರೆಯೂ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು.ಕಾಂಗ್ರೆಸ್ ಮುಖಂಡ ಬೋಸ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಚಿತ್ರನಟ ಆರ್ಜುನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಪ್ರಚಾರ ಪಡೆಯಲು ಇಂತಹ ಕೀಳು ಮಟ್ಟದ ಗಿಮಿಕ್ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿಡಿಕಾರಿದ್ದಾರೆ.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುನೀಲ್ ಬೋಸ್ ವಿರುದ್ಧ ಗಂಭೀರ ಆರೋಪ ಮಾಡಿದ ಅವರು ಪ್ರಚಾರ ಪಡೆಯುವ ಭರದಲ್ಲಿ ಸರ್ಕಾರದ ವಿರುದ್ಧ ಕ್ಷುಲ್ಲಕ ಟೀಕೆಗೆ ಮುಂದಾಗಿರುವ ಬೋಸ್ ತಾವು ಮಾಡಿರುವ ಟೀಕೆಗೆ ದಾಖಲೆ ಒದಗಿಸಲಿ ಎಂದು ಸವಾಲೆಸದರು.
ಸರ್ಕಾರಿ ಆಸ್ಪತ್ರೆಯಲ್ಲಿ ಪ್ಯಾರಾಸಿಟಮಲ್ ಮಾತ್ರೆ ಸಿಗುತ್ತಿಲ್ಲ ಎಂಬ ಹೇಳಿಕೆ ಬಾಲಿಶತನದಿಂದ ಕೂಡಿದೆ.ತಾಲೂಕು ಆರೋಗ್ಯಾಧಿಕಾರಿಗಳಾಗಲೀ ಅಥವಾ ತಹಶೀಲ್ದಾರ್ ಆಗಲಿ ಮಾತ್ರೆಗಳು ಸಿಗುತ್ತಿಲ್ಲ ಎಂದು ನಿಮಗೆ ಲಿಖಿತ ದೂರು ನೀಡಿದ್ದಾರಾ?ಸುಕಾ ಸುಮ್ಮನೇ ಸರ್ಕಾರವನ್ನು ಟೀಕಿಸಬೇಕೆಂದೇ ಟೀಕೆ ಮಾಡುವುದಲ್ಲ.ಅದಕ್ಕೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ವ್ಯಂಗ್ಯವಾಡಿದರು.
ಬಹಿರಂಗ ಚರ್ಚೆಗೆ ಆಹ್ವಾನ
ಸರ್ಕಾರದ ಬಗ್ಗೆ ಟೀಕೆ ಮಾಡಬೇಕಾದರೆ ಟೀಕೆ ಮಾಡುವ ನಾವುಮೊದಲು ಸರಿ ಇದ್ದೀವಾ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ.ಕೋವಿಡ್ ನಿಯಂತ್ರಣಕ್ಕಾಗಿ ಉಸ್ತುವಾರಿ ಸಚಿವರ ಕಾರ್ಯ ವೈಖರಿಯನ್ನು ಗಮನಿಸುತ್ತಿದ್ದೀರಾ, ಅವರ ಕ್ಷೇತ್ರದಲ್ಲಿ ಸೋಂಕಿತರ ಕಲ್ಯಾಣಕ್ಕಾಗಿ ತಮ್ಮ ಸ್ವಂತ ಹಣ 1 ಕೋಟಿ ರೂ.ಗಳನ್ನು ನೀಡಿರುವುದು ನಿಮಗೇನು ಗೊತ್ತು. ಪ್ರಚಾರದ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡುವುದನ್ನು ಮೊದಲು ನಿಲ್ಲಿಸಿ. ಮೊದಲು ಸಚಿವರಾಗಿದ್ದವರು ಎಷ್ಟು ಬಾರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.ಕ್ಷೇತ್ರ ಎಂದರೆ ಸರ್ಕಾರ ಮತ್ತು ಮಂತ್ರಿಗಳು ಮಾತ್ರ ಜವಾಬ್ದಾರಿ ಯಾಗ ಬೇಕಾ? ಜನಪ್ರತಿನಿಧಿಗಳು, ಶಾಸಕರಿಗೆ ಸಂಬಂಧ ಇಲ್ಲವೇ?ತಿ.ನರಸೀಪುರ ಶಾಸಕರ ಬಗ್ಗೆ ಒಂದೇ ಒಂದು ಹೇಳಿಕೆ ನೀಡುತ್ತಿಲ್ಲ.ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಾ.ನಿಮ್ಮೊಂದಿಗೆ ಮಕ್ತವಾಗಿ ಚರ್ಚಿಸಲು ಸಿದ್ದನಿದ್ದೇನೆ ಎಂದರು.
ಹಿಂದುಳಿದ ವರ್ಗಗಳ ಅಧ್ಯಕ್ಷ ನಂಜುಂಡಸ್ವಾಮಿ, ಎಸ್/ಸಿ ಮೋರ್ಚಾ ಅಧ್ಯಕ್ಷ ಚೌಹಳ್ಳಿ ಸಿದ್ದರಾಜು ಹಾಜರಿದ್ದರು.