ಬೋರ್‌ವೆಲ್‌ಗೆ ಬಿದ್ದ ಬಾಲಕಿ ರಕ್ಷಣೆ

ದ್ವಾರಕಾ,ಜ.೨-ಗುಜರಾತ್ ನ ದ್ವಾರಕಾ ಜಿಲ್ಲೆಯಲ್ಲಿ ಹೊಸ ವರ್ಷ ಜನವರಿ ೧ರಂದು ದಾರುಣ ಘಟನೆಯೊಂದು ನಡೆದಿದೆ. ಏಂಜಲ್ ಸಬ್ರಾ ಎಂಬ ಎರಡೂವರೆ ವರ್ಷದ ಬಾಲಕಿಯೊಬ್ಬಳು ೩೦ ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಆಡುವ ಸಮಯದಲ್ಲಿ ಇದ್ದಕ್ಕಿದ್ದಂತೆ ಬಿದ್ದಿದ್ದಾಳೆ. ಕೂಡಲೇ ಸ್ಥಳಕ್ಕಾಗಮಿಸಿದ ಭಾರತೀಯ ಸೇನೆಯ ಸೈನಿಕರು ಮತ್ತು ಎನ್‌ಡಿಆರ್‌ಎಫ್ ತಂಡದ ಅಧಿಕಾರಿಗಳು ಮಗುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಆದರೆ ರಕ್ಷಿಸಿದ ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಮಗುವನ್ನು ಸುರಕ್ಷಿತವಾಗಿ ರಕ್ಷಿಸುವ ತೀವ್ರ ಕಾರ್ಯಾಚರಣೆ ಎಂಟು ಗಂಟೆಗಳ ಕಾಲ ನಡೆದಿದೆ .ನಂತರ ಆಕೆಯನ್ನು ಖಂಬಲಿಯಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರ ಪ್ರಕಾರ, ಆಮ್ಲಜನಕದ ಕೊರತೆಯಿಂದ ಮಗು ಸರಿಯಾಗಿ ಉಸಿರಾಡಲು ಸಾಧ್ಯವಾಗದೆ ತೊಂದರೆ ಉಂಟಾಗಿದೆ ಇದು ಮಗುವಿನ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಅಂತಿಮ ವರದಿ ಬಂದ ನಂತರ ಸಾವಿಗೆ ಖಚಿತ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ದ್ವಾರಕಾ ಜಿಲ್ಲೆಯ ಕಲ್ಯಾಣಪುರಿ ತಹಸಿಲ್‌ನ ರಾನ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ವೇಳೆ ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದಳು. ಮಧ್ಯಾಹ್ನ ೧ ಗಂಟೆಗೆ ರಾನ್ ಗ್ರಾಮದಲ್ಲಿ ಆಟವಾಡುತ್ತಿದ್ದಾಗ ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದಾಳೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಬಿ.ಭಾಗೋರಾ ತಿಳಿಸಿದ್ದಾರೆ.