ಬೋರೇಗೌಡರ ಅಕಾಲಿಕ ಮರಣಕ್ಕೆ ಶ್ರದ್ಧಾಂಜಲಿ

ಪಿರಿಯಾಪಟ್ಟಣ: ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಬೋರೇಗೌಡರ ಅಕಾಲಿಕ ನಿಧನಕ್ಕೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್ ಮಾತನಾಡಿ ಕರ್ತವ್ಯದಲ್ಲಿ ನಿಷ್ಟುರವಾದಿ ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಸ್ನೇಹಜೀವಿ ಬೋರೇಗೌಡರ ನಿಧನ ಇಲಾಖೆಗೆ ತುಂಬಲಾರದ ನಷ್ಟವಾಗಿದೆ, ಉತ್ತಮ ಕೆಲಸಗಳ ಮೂಲಕ ತಾಲ್ಲೂಕಿನ ವಿವಿಧೆಡೆ ಜನಾನುರಾಗಿಯಾಗಿದ್ದ ಅವರು ಜನಪ್ರತಿನಿಧಿಗಳೊಂದಿಗೆ ಸಹ ಉತ್ತಮ ಸಂಪರ್ಕದಲ್ಲಿದ್ದು ತಮ್ಮ ದಕ್ಷ ಕಾರ್ಯ ವೈಖರಿಯ ಮೂಲಕ ಮನೆಮಾತಾಗಿದ್ದರು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ ಗ್ರಾ.ಪಂ ಚುನಾವಣೆ ಮತ ಎಣಿಕೆ ಸಂದರ್ಭ ಬೆಳಿಗ್ಗೆ ಜೊತೆಯಲ್ಲೇ ಇದ್ದೆವು, ಸಂಘದ ಎಲ್ಲ ಚಟುವಟಿಕೆಗಳಲ್ಲಿ ಹಸನ್ಮುಖಿಯಿಂದ ಭಾಗವಹಿಸಿಸುವುದರ ಮೂಲಕ ಸಹಕಾರ ನೀಡುತ್ತಿದ್ದರು ಅವರ ಅಕಾಲಿಕ ನಿಧನ ಸುದ್ದಿ ತಿಳಿದು ಆಘಾತವಾಯಿತು, ಎಲ್ಲರೊಂದಿಗೂ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಅವರ ನಿಧನ ತುಂಬಲಾರದ ನಷ್ಟವಾಗಿದ್ದು ಕುಟುಂಬದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ ಪ್ರಕಾಶ್, ಉಪಾಧ್ಯಕ್ಷ ರಾದ ಅಶೋಕ್, ಕೆ.ಆರ್ ಪ್ರಕಾಶ್, ಧರ್ಮಪಾಲ್, ಉಷಾ, ಕಾರ್ಯಾಧ್ಯಕ್ಷ ನಾಗಣ್ಣೆಗೌಡ, ಕಾರ್ಯದರ್ಶಿ ಶಿವಕುಮಾರಯ್ಯ, ನಿರ್ದೇಶಕರಾದ ಚಂದ್ರು, ಗುರು ಸೋಮಾರಾಧ್ಯ, ವಾಸುದೇವರಾವ್, ಗಿರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಮಾಜಿ ಅಧ್ಯಕ್ಷ ಗಣೇಶ್ ಕುಮಾರ್, ಬಳಕೆದಾರರ ಸಂಘದ ಅಧ್ಯಕ್ಷ ದೇವರಾಜ್, ಬಿ.ಐ.ಆರ್.ಟಿ ಪುಟ್ಟರಾಜು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಸಂತಾಪ ಸೂಚಿಸಿದರು.
ಈ ಸಂದರ್ಭ ಲೋಕೋಪಯೋಗಿ ಇಲಾಖೆ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.