ಬೋನಿಗೆ ಬಿದ್ದ ಚಿರತೆ!

ಕುಣಿಗಲ್, ನ. ೧೯- ಸಾರ್ವಜನಿಕರ ನಿದ್ದೆಗೆಡಿಸಿದ್ದ ಎರಡು ವರ್ಷದ ಚಿರತೆಯೊಂದು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ಕೊತ್ತಗೆರೆ ಹೋಬಳಿಯಲ್ಲಿ ನಡೆದಿದೆ.
ಕೊತ್ತಗೆರೆ ಹೋಬಳಿ ಗಿಡದಪಾಳ್ಯ ಗ್ರಾಮದ ಸುತ್ತಮುತ್ತ ಚಿರತೆಯ ಕಾಟ ಜಾಸ್ತಿಯಾಗಿದೆ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನನ್ನು ಗಿಡದಪಾಳ್ಯ ಗ್ರಾಮದ ಗಂಗಾಧರಯ್ಯ ನವರ ಮನೆ ಬಳಿಯಲ್ಲಿ ಇಟ್ಟಿದ್ದರು.
ಈ ಬೋನಿಗೆ ಚಿರತೆ ಬೀಳುವ ಮೂಲಕ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಬೋನಿಗೆ ಬಿದ್ದಿರುವ ಚಿರತೆಯನ್ನು ನೋಡಲೆಂದು ಜನರು ಕಿಕ್ಕಿರಿದು ಸೇರಿದ್ದರು.
ಈ ಸಂಬಂಧ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಮಾತನಾಡಿ, ಚಿರತೆ ಸುರಕ್ಷಿತವಾಗಿದೆ. ವೈದ್ಯರ ಆರೋಗ್ಯ ತಪಾಸಣೆ ನಂತರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದಂತೆ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉಪ ಅರಣ್ಯಾಧಿಕಾರಿ ಶಂಕರ್ ಹಾಗೂ ಸಿಬ್ಬಂದಿಗಳು ಇದ್ದರು.