ಬೋನಿಗೆ ಬಿದ್ದ ಚಿರತೆ ನಿಟ್ಟುಸಿರು ಬಿಟ್ಟ ಜನತೆ

ಸಂಜೆವಾಣಿ ವಾರ್ತೆ
ಹನೂರು ಏ 19 :- ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಆಂಡಿ ಪಾಳ್ಯ ಬಳಿ ಜಮೀನಿನಲ್ಲಿ ಇರಿಸ ಲಾಗಿದ್ದ ಬೋನಿಗೆ ಗುರುವಾರ ಚಿರತೆ ಸೆರೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟರು.
ಲೊಕ್ಕನಹಳ್ಳಿ ಭಾಗದಲ್ಲಿ ಕಳೆದ ನಾಲೈದು ತಿಂಗಳಿನಿಂದ ಚಿರತೆ ಜಮೀನುಗಳಿಗೆ ಲಗ್ಗೆ ಇಟ್ಟು ಹಸು, ಮೇಕೆ ಹಾಗೂ ಕೋಳಿಗಳನ್ನು ಕೊಂದು ಹಾಕಿತ್ತು. ಅಲ್ಲದೇ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಜನರು ಭಯಭೀತರಾಗಿದ್ದರು. ಜತೆಗೆ ರೈತರು ರಾತ್ರಿ ವೇಳೆ ಜಮೀನುಗಳಿಗೆ ತೆರಳಲು ಹಿಂದೆಟು ಹಾಕುತ್ತಿದ್ದರು. ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಕಳೆದ ತಿಂಗಳ ಹಿಂದೆ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳ ಜತೆಗೂಡಿ ಲೊಕ್ಕನಹಳ್ಳಿ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು.
ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶದ ಕಾಡಅಂಚು ಹಾಗೂ ಈಭಾಗದ ಇನ್ನಿತರ ಕಡೆಗಳಲ್ಲಿ ಬೋನು ಇರಿಸಿದ್ದರು. ಇದರಲ್ಲಿ ಅಂಡಿಪಾಳ್ಯ ಬಳಿಯ ಮಹಾಲಿಂಗಂ ಅವರ ಜಮೀನು ಸಮೀಪ ಇರಿಸಲಾಗಿದ್ದ ಬೋನಿಗೆ ಬುಧವಾರ ರಾತ್ರಿ ಚಿರತೆ ಸೆರೆಯಾಗಿದೆ. ಗುರುವಾರ ಗಸ್ತಿನಲ್ಲಿದ್ದ ಸಿಬ್ಬಂದಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲಿಸಿದರು.
ಸೆರೆಯಾಗಿರುವ ಚಿರತೆಯನ್ನು ಬೇರೆಡೆ ಅರಣ್ಯ ಪ್ರದೇಶಕ್ಕೆ ಬಿಡುವಂತೆ ರೈತರು ಒತ್ತಾಯಿಸಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವ ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಆರ್.ಎಫ್.ಒ ವಾಸು ಸಂಜೆವಾಣಿಗೆ ತಿಳಿಸಿದ್ದಾರೆ.