ಬೋನಿಗೆ ಬಿತ್ತು ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಸಂಜೆವಾಣಿ ವಾರ್ತೆ
ಯಳಂದೂರು: ಆ.3:- ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಉಪಟಳ ನೀಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗುಡ್ಡದ ಬಳಿ ಮಂಗಳವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಬಾನಿಗೆ ಬಿದ್ದಿರುವುದನ್ನು ವೀಕ್ಷಿಸಲು ಅಕ್ಕಪಕ್ಕದ ಗ್ರಾಮದ ಜನರು ಸಾಗರೋಪಾದಿಯಲ್ಲಿ ಆಗಮಿಸಿ ವೀಕ್ಷಿಸಿದ್ದಾರೆ.
ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿಯಲ್ಲಿ ಬಾಲಕನೊಬ್ಬನ ಮೇಲೆ ದಾಳಿ ಮಾಡಿದ್ದ ಚಿರತೆ ಸುತ್ತಮುತ್ತ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿತ್ತು. 12 ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದರು.
ಅರಣ್ಯ ರಕ್ಷಕರು ವಿವಿಧಡೆ ಬೋನುಗಳನ್ನು ಇಟ್ಟು ಕಾಯುತ್ತಿದ್ದರು. ಕೆಲವೆಡೆ ಸೆರೆಗೆ ಅನುಕೂಲವಾಗುವಂತೆ ನಾಯಿ, ಆಡು ಹಾಗೂ ಜಾನುವಾರುಗಳನ್ನು ಬಿಟ್ಟು ವೀಕ್ಷಿಸುತ್ತಿದ್ದರು. ಕೆಲವೆಡೆ ಕಣ್ಣಿಗಾಗಲು ಕ್ಯಾಮೆರಾಗಳ ಮೇಲೆ ನಿಗಾ ಇಟ್ಟಿದ್ದರು. ಚಿರತೆ ಬೋನಿಗೆ ಬಿದ್ದಿರೋದು ಜನರಲ್ಲಿದ್ದ ಭಯದ ವಾತಾವರಣವನ್ನು ದೂರ ಮಾಡಿದಂತಾಗಿದೆ.
ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆಯವರು ಸುರಕ್ಷಿತವಾಗಿ ಬನ್ನೆರುಘಟ್ಟ ವನ್ಯಜೀವಿ ವಲಯಕ್ಕೆ ಸಾಗಿಸಲಾಗಿದೆ ತಿಳಿದು ಬಂದಿದೆ.