ಬೋಧನೆಯಲ್ಲಿ ಹೊಸ ನಾವಿನ್ಯತೆ  ಅಳವಡಿಸಿಕೊಳ್ಳಲು‌ ಸಲಹೆ 

 ದಾವಣಗೆರೆ ಆ.30; ಪ್ರೌಢಶಾಲೆಗಳಲ್ಲಿ ಸಮಾಜ-ವಿಜ್ಞಾನ ಬೋಧಿಸುತ್ತಿರುವ ಶಿಕ್ಷಕರು ಅತ್ಯಂತ ಸಂಪನ್ಮೂಲ ಭರಿತವಾದಂತಹವರಾಗಿದ್ದಾರೆ. ಸಮಾಜ ವಿಜ್ಞಾನ ವಿಷಯವು ಬರುವ ದಿನಗಳಲ್ಲಿ ಎದುರಾಗುವಂತಹ ಸವಾಲು ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಂಡು ಮಕ್ಕಳಿಗೆ ಬೋಧಿಸಬೇಕಾದಂತಹ ಹೊಣೆಗಾರಿಕೆ ಸಮಾಜ ವಿಜ್ಞಾನ ಶಿಕ್ಷಕರ ಮೇಲಿದೆ. ಇದಕ್ಕಾಗಿ ಸಮಾಜ ವಿಜ್ಞಾನ ಶಿಕ್ಷಕರು ತಮ್ಮ ಬೋಧನೆಯಲ್ಲಿ ಹೊಸಹೊಸ ನಾವಿನ್ಯತೆಯನ್ನು ಕಂಡುಕೊಂಡು ಅಳವಡಿಸಿಕೊಳ್ಳಬೇಕೆಂದು  ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ನಿರಂಜನಮೂರ್ತಿ ಸಮಾಜ ವಿಜ್ಞಾನ ಶಿಕ್ಷಕರಿಗೆ ಕರೆ ನೀಡಿದರು. ದಾವಣಗೆರೆಯ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ದಾವಣಗೆರೆ ದಕ್ಷಿಣ ವಲಯದ ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಮುಂದುವರೆದು ಮಾತನಾಡುತ್ತ ಶಿಕ್ಷಕರ ವಿಷಯ ಸಂಪನ್ಮೂಲ ಹೆಚ್ಚಿಸಲು, ಶಿಕ್ಷಕರು ಪ್ರೆಷಪ್ ಆಗಲು, ಹಾಗೂ ತಮ್ಮ ಬೋಧನೆಯಲ್ಲಿ  ಎದುರಾಗುವ ಕ್ಲಿಷ್ಟ ಅಂಶಗಳಿಗೆ  ಉತ್ತರ ಹಾಗೂ ಪರಿಹಾರ ಕಂಡುಕೊಳ್ಳಲು, ವಿಷಯದ ಅಪ್ಡೇಟ್ ಆಗಲು ಇಂತಹ ಕಾರ್ಯಗಾರಗಳು ಸಹಕಾರಿಯಾಗುತ್ತವೆ. ಇದನ್ನು ಎಲ್ಲಾ ಸಮಾಜ ವಿಜ್ಞಾನ ಶಿಕ್ಷಕರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಮತಿ ಶಶಿಕಲಾ ಮಾತನಾಡಿ 2021- 22 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಶೇಕಡ 97.57 % ರಷ್ಟು ಫಲಿತಾಂಶ ಪಡೆಯುವುದರೊಂದಿಗೆ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದೇವೆ. ಇಂದು ನಮ್ಮ ಶಿಕ್ಷಕರ ಮೇಲೆ ಸಾಕಷ್ಟು ಕೆಲಸ ಕಾರ್ಯಗಳ ಒತ್ತಡವಿದೆ. ಪಠ್ಯವನ್ನು  ಮುಗಿಸುವ ಒತ್ತಡ ಒಂದುಕಡೆಯಾದರೆ, ಕಲಿಕಾ ಚೇತರಿಕೆ ಕಾರ್ಯಕ್ರಮದ ನಿರ್ವಹಣೆಯೂ ಒಂದು ಸವಾಲಾಗಿ ಪರಿಣಮಿಸಿದೆ ಎಂದರು. ಮತದಾರರ ಗುರುತಿನ ಪತ್ರಕ್ಕೆ ಆಧಾರ್ ಲಿಂಕ್ ಮಾಡುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಆ ಮೂಲಕ ಪೋಷಕರ ಮತದಾರರ ಗುರುತಿನ ಪತ್ರಕ್ಕೆ ಆಧಾರ್ ಲಿಂಕ್ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಹೀಗೆ ಇಲಾಖೆಯು ನಿರ್ದಿಷ್ಟಪಡಿಸಿದ ಕೆಲಸಕಾರ್ಯಗಳನ್ನು ನಾವೆಲ್ಲ ಯಶಸ್ವಿಯಾಗಿ ಮಾಡೋಣ ಎಂದು ಸಮಾಜ ವಿಜ್ಞಾನ ಶಿಕ್ಷಕರಿಗೆ  ತಿಳಿಸಿದರು.ಮುಂದುವರೆದು ಅವರು ಮಾತನಾಡುತ್ತ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸೋಣವೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ  ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ದುರ್ಗಪ್ಪ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಮಹೇಶ್ ದೊಡ್ಡಮನಿ , ಸಮಾಜ ವಿಜ್ಞಾನ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ ರಾಜ್,ದಾವಣಗೆರೆ ದಕ್ಷಿಣ ವಲಯದ ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ, ದಾವಣಗೆರೆ ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕ್ಲಬ್ ನ ಕೋಶಾಧ್ಯಕ್ಷ ರಾಜಗೋಪಾಲ್,ಜಗದೀಶ್ ಕೂಲಂಬಿ ಮತ್ತಿತರರು ಉಪಸ್ಥಿತರಿದ್ದರು.

Attachments area