ಬೋಧನಾ ಶುಲ್ಕ ಹಿಂದಿರುಗಿಸಲು ಖಾಸಗಿ ಶಾಲೆಗಳಿಗೆ ಸೂಚನೆ

ಬೆಂಗಳೂರು.ನ೧೩:೨೦೨೦-೨೧ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಪಡೆದಿರುವ ಪೂರ್ಣ ಬೋಧನಾ ಶುಲ್ಕದಲ್ಲಿ ಶೇ ೧೫ರಷ್ಟು ಶುಲ್ಕವನ್ನು ತಕ್ಷಣ ಹಿಂದಿರುಗಿಸಬೇಕು ಎಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಉಳಿದಂತೆ ಶಾಲಾ ಅಭಿವೃದ್ಧಿ ಶುಲ್ಕ ಸೇರಿದಂತೆ ಇತರ ಶುಲ್ಕಗಳು, ಟ್ರಸ್ಟ್ ಅಥವಾ ಸೊಸೈಟಿಗೆ ದೇಣಿಗೆ ಸ್ವೀಕರಿಸಬಾರದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚಿಸಿದೆ.
ಹೆಚ್ಚುವರಿ ಶುಲ್ಕವನ್ನು ೨೦೨೧-೨೨ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಪೂರ್ಣಪ್ರಮಾಣದಲ್ಲಿ ಪಡೆದಿರುವ ಶುಲ್ಕದಲ್ಲಿ ಶೇ೮೫% ರಷ್ಟನ್ನು ಉಳಿಸಿಕೊಂಡು ಶೇ೧೫ ರಷ್ಟು ಶುಲ್ಕವನ್ನು ಹಿಂದಿರುಗಿಸಬೇಕೆಂದು ತಿಳಿಸಿದೆ. ಒಂದೊಮ್ಮೆ ನಿಗದಿಪಡಿಸಿದ ಶುಲ್ಕಕ್ಕಿಂತ (ಶೇ ೮೫ಕ್ಕಿಂತ ಹೆಚ್ಚು) ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಚಿಸಿದರೆ ಅದಕ್ಕೂ ಅವಕಾಶವಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಕೋವಿಡ್ ಕಾರಣದಿಂದ ಪೋಷಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಖಾಸಗಿ ಶಾಲೆಗಳು ೨೦೨೦?೨೧ನೇ ಸಾಲಿನಲ್ಲಿ ಬೋಧನಾ ಶುಲ್ಕದಲ್ಲಿ ಶೇ ೩೦ರಷ್ಟು ಕಡಿತ ಮಾಡುವಂತೆ ರಾಜ್ಯ ಸರ್ಕಾರ ೨೦೨೧ರ ಜ. ೨೯ರಂದು ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಮಧ್ಯೆ, ಪೋಷಕರಿಂದ ಪೂರ್ಣ ಶುಲ್ಕ ವಸೂಲು ಮಾಡಿದ್ದ ಅನೇಕ ಖಾಸಗಿ ಶಾಲೆಗಳು, ಹೈಕೋರ್ಟ್ ಅಂತಿಮ ತೀರ್ಪು ಬಂದ ಬಳಿಕ ಶುಲ್ಕ ಕಡಿತ ಮಾಡುವುದಾಗಿ ಹೇಳಿದ್ದವು. ಸರ್ಕಾರದ ಆದೇಶವನ್ನು ಪರಿಷ್ಕರಿಸಿ ಇದೇ ಸೆ. ೧೬ರಂದು ತೀರ್ಪು ನೀಡಿರುವ ಹೈಕೋರ್ಟ್, ಶೇ ೧೫ರಷ್ಟು ಶುಲ್ಕ ಕಡಿತ ಮಾಡುವಂತೆ ಖಾಸಗಿ ಶಾಲೆಗಳಿಗೆ ಸೂಚಿಸಿದೆ. ಆದರೆ, ಅನೇಕ ಶಿಕ್ಷಣ ಸಂಸ್ಥೆಗಳು ಈ ಆದೇಶವನ್ನು ಪಾಲಿಸಿಲ್ಲ. ಹೀಗಾಗಿ, ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ.

ಖಾಸಗಿ ಶಾಲೆಗಳ ಶುಲ್ಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ತೀರ್ಪನ್ನು ಸರ್ಕಾರ ತಿರುಚಿದೆ. ತೀರ್ಪನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗಿಲ್ಲ. ಈ ಮೂಲಕ ಪೋಷಕರಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಸಲಾಗಿದೆ. ಸರ್ಕಾರದ ಈ ಆದೇಸದಿಂದ ಪೋಷಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಸಂಘರ್ಷ ಏರ್ಪಡಲಿದೆ.
ಬೋಧನಾ ಶುಲ್ಕ ರಿಯಾಯಿತಿಗೆ ಮಾತ್ರ ಸೂಚಿಸಿದೆ. ಸರ್ಕಾರದ ಈ ಆದೇಶದ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗುವುದು.
-ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ