ಬೋಧನಾ ಉಪಕರಣಗಳಿಂದ ಕಲಿಕೆ ಪರಿಣಾಮಕಾರಿ

ಲಕ್ಷ್ಮೇಶ್ವರ,ಮಾ30: ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಶಿಕ್ಷಕರು ಬೋಧನಾ ಉಪಕರಣಗಳನ್ನು ಬಳಸಬೇಕು. ಆಗ ವಿದ್ಯಾರ್ಥಿಗಳು ಆ ವಸ್ತುಗಳನ್ನು ಜ್ಞಾನೇಂದ್ರಿಯಗಳ ಮೂಲಕ ಅನುಭವಿಸುವುದರಿಂದ ಕಲಿಕೆ ಶಾಶ್ವತಗೊಳ್ಳುತ್ತದೆ ಎಂದು ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು.
ಅವರು ಸೋಮವಾರ ಬಸ್ತಿಬಣದ ಸಿ. ಎಸ್.ಪಿಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಿಕೋಪಕರಣ, ವಿಜ್ಞಾನ-ಗಣಿತ, ರಂಗೋಲಿ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ, ಕೌಶಲ್ಯ, ಬುದ್ದಿಮತ್ತೆ ಒರೆಗೆ ಹಚ್ಚಲು ಶಾಲೆಗಳಲ್ಲಿ ಹಮ್ಮಿಕೊಳ್ಳುವ ವಸ್ತು ಪ್ರದರ್ಶನಗಳು ಸೂಕ್ತ ವೇದಿಕೆಗಳಾಗಿವೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ಶಿಕ್ಷಣದ ಉದ್ದೇಶವಾಗಿದೆ. ವಿಜ್ಞಾನದ ಸರಳ ಪ್ರಯೋಗಗಳ ಮೂಲಕ ಮಕ್ಕಳ ಮನಸ್ಸನ್ನು ಅರಳಿಸಿ ಅವರಲ್ಲಿ ಕುತೂಹಲ ಮತ್ತು ಸೃಜನಶೀಲತೆಯನ್ನು ಉದ್ಧೀಪಿಸುವ ಕಾರ್ಯ ಶಿಕ್ಷಕರದ್ದಾಗಿದೆ. ವಿಜ್ಞಾನ ನಿತ್ಯದ ಬದುಕಿನೊಂದಿಗೆ ಬೆಸೆದುಕೊಂಡಿದೆ. ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸಲು “ನೋಡಿ ಕಲಿ ಮಾಡಿ ತಿಳಿ” ತತ್ವದಡಿ ಪ್ರಯೋಗ, ಪ್ರಾತ್ಯಕ್ಷಿಕೆ ಮೂಲಕ ಕಲಿಸಬೇಕು ಎಂದರು.
ಬಿಇಓ ಆರ್.ಎಸ್. ಬುರಡಿ ವಸ್ತು ಪ್ರದರ್ಶನ ವೀಕ್ಷಿಸಿ ಮಾತನಾಡಿ, ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ. ಮಕ್ಕಳು ಶಿಕ್ಷಣವಂತರಾದರೆ ಅವರ ಬದುಕು ಸುಂದರವಾಗುತ್ತದೆ. ಅವರು ಕಲಿಕಾ ಸಂಪನ್ಮೂಲಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ಕಲಿಕೆಯಲ್ಲಿ ಆಸಕ್ತಿ, ವೇಗ ಹೆಚ್ಚಿಸುತ್ತದೆ. ಕಲಿಕೆಯಲ್ಲಿ ಹೊಸತನ, ವೈವಿಧ್ಯತೆಯನ್ನುಂಟು ಮಾಡುವ ಮೂಲಲಕ ಆತ್ಮವಿಶ್ವಾಸ, ಏಕಾಗ್ರತೆ ಹೆಚ್ಚಿಸುತ್ತವೆ. ಆದ್ದರಿಂದ ಶಿಕ್ಷಕರು ಪಠ್ಯ ಬೋಧನೆಯಲ್ಲಿ ಪೂರಕವಾದ ಲಬ್ಯ ಮತ್ತು ಹೊಸದಾದ ಕಲಿಕಾ ಉಪಕರಣಗಳನ್ನು ಬಳಸಬೇಕು ಎಂದರು.
ಪ್ರದರ್ಶನದಲ್ಲಿ ಶಾಲೆಯ ಮಕ್ಕಳು ಪ್ರತಿಯೊಂದರ ವಿವರವನ್ನು ತಮ್ಮದೆ ಆದ ಬುದ್ದಿಮಟ್ಟದಿಂದ ವಿವರಿಸಿದರು. ಅಲ್ಲದೆ ಎಲ್ಲ ತರಕಾರಿಗಳಿಂದ ಬಿಡಿಸಿದ ರಂಗೋಲಿ ಪ್ರದರ್ಶನ ಆಕರ್ಷಣೆಯಾಗಿತ್ತು. ಅಲ್ಲದೆ ತರಕಾರಿಗಳಲ್ಲಿರುವ ವಿಟಮಿನಗಳ ಬಗ್ಗೆ ಮಕ್ಕಳು ಅಧಿಕಾರಿಗಳಿಗೆ ವಿವರಿಸಿದಾಗ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಳೆಯ ವಸ್ತುಗಳ ಪ್ರದರ್ಶನ, ರಂಗೋಲಿ ಪ್ರದರ್ಶನ ಪ್ರಮುಖವಾಗಿದ್ದವು.
ಈ ವೇಳೆ ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಶರೀಪಸಾಬ ನಧಾಪ್, ಉಮೇಶ ಹುಚ್ಚಯ್ಯನಮಠ, ಬಿ.ಎಸ್.ಹರ್ಲಾಪೂರ, ಸಿಆರ್.ಸಿಗಳಾದ ಎನ್.ಎನ್.ಶಿಗ್ಲಿ, ಸತೀಶ ಬೋಮಲೆ, ಎಸ್.ವ್ಹಿ.ಪಾಟೀಲ, ಎನ್.ಎಸ್.ಪಾಟೀಲ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಘವೇಂದ್ರ ಬನ್ನಿ, ಪುರಸಭೆ ಸದಸ್ಯೆ ಯಲ್ಲಮ್ಮ ದುರ್ಗಣ್ಣವರ, ನಿಂಗಪ್ಪ ಬನ್ನಿ,ಗಣಪ್ಪ ಪೂಜಾರ, ಮುಂತಾದವರಿದ್ದರು. ಮುಖ್ಯೋಪಾಧ್ಯಾಯನಿ ವ್ಹಿ.ಕೆ.ಪೂಜಾರ ನಿರ್ವಹಿಸಿದರು.