
ಕಲಬುರಗಿ,ಮಾ.4: ಜಿಲ್ಲೆಯ ಆಳಂದ್ ತಾಲ್ಲೂಕಿನ ಬೋಧನ್ ಗ್ರಾಮದಲ್ಲಿ ಇದೇ ಮಾರ್ಚ್ 11ರಂದು ಅಪರಾಹ್ನ 12 ಗಂಟೆಗೆ ಬುದ್ಧ ವಿಹಾರದ ಲೋಕಾರ್ಪಣೆ ಹಾಗೂ ಸಾಮಾಜಿಕ ಪರಿವರ್ತನಕಾರರಾದ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ವರ್ಣ ಲೇಪಿತ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭೀಮಗರ್ಜನೆ ನವ ತರುಣ ಸಂಘದ ಅಧ್ಯಕ್ಷ ಹಣಮಂತ್ ಬೋಧನಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಎಸ್‍ಸಿ, ಎಸ್ಟಿಯವರೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಇಡೀ ಗ್ರಾಮದ ಎಲ್ಲ ಸಮುದಾಯದವರು ಒಳಗೊಂಡು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಮೊದಲು ಬುದ್ಧ, ಬಸವ, ಅಂಬೇಡ್ಕರ್ ಎಂಬ ಬ್ಯಾನರ್‍ಗಳನ್ನು ಮಾತ್ರ ಹಾಕಲಾಗುತ್ತಿತ್ತು. ಆದಾಗ್ಯೂ, ಈ ಬಾರಿ ನಾವು ಹೊಸ ಪ್ರಯೋಗ ಮಾಡಿದ್ದೇವೆ. ಬುದ್ಧ ವಿಹಾರದ ಮೇಲೆ ಬುದ್ಧ, ಬಸವಣ್ಣನವರು ಹಾಗೂ ಅಂಬೇಡ್ಕರ್ ಅವರ ಮೂರ್ತಿಗಳನ್ನು ಲೋಕಾರ್ಪಣೆ ಮಾಡಲಾಗುವುದು. ಅಂಬೇಡ್ಕರ್ ಅವರ ಪುತ್ಥಳಿ 8 ಅಡಿ ಇದ್ದು, ಬುದ್ಧ ಹಾಗೂ ಬಸವಣ್ಣನವರ ಪುತ್ಥಳಿಗಳು ನಾಲ್ಕೂವರೆ ಅಡಿ ಇದ್ದು, ಮಧ್ಯದಲಿ ಅಂಬೇಡ್ಕರ್ ಅವರ ಪುತ್ಥಳಿ, ಎರಡೂ ಬದಿಗಳಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣನವರ ಪುತ್ಥಳಿಗಳನ್ನು ಅನಾವರಣಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಬುದ್ಧರ ಮೂರ್ತಿಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಮತ್ತು ಕೊಳ್ಳೆಗಾಲ್ ಶಾಸಕ ಎನ್. ಮಹೇಶ್ ಅವರು, ಬುದ್ಧ ವಿಹಾರವನ್ನು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಲೋಕಾರ್ಪಣೆಗೊಳಿಸುವರು. ಬಸವಣ್ಣನವರ ಮೂರ್ತಿಯನ್ನು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್. ನಿರಾಣಿ, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಅಂಬೇಡ್ಕರ್ ಅವರ ಮೂರ್ತಿಯನ್ನು ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್, ಡಾ. ಅಜಯಸಿಂಗ್ ಅವರು ಲೋಕಾರ್ಪಣೆಗೊಳಿಸುವರು ಎಂದು ಅವರು ಹೇಳಿದರು.
ಸಾನಿಧ್ಯವನ್ನು ಬೀದರ್ ಆಣದೂರಿನ ಭಂತೆ ವರಜ್ಯೋತಿ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ವಿಶ್ವನಾಥ್ ಕೋರಣೇಶ್ವರ್ ಸ್ವಾಮೀಜಿ, ಹವಾ ಮಲ್ಲಿನಾಥ್ ಮಹಾರಾಜರು ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಿ.ಆರ್. ಪಾಟೀಲ್, ರೇವು ನಾಯಕ್ ಬೆಳಮಗಿ, ಅಲ್ಲಮಪ್ರಭು ಪಾಟೀಲ್, ಮಾಜಿ ಮೇಯರ್ ಶರಣಕುಮಾರ್ ಮೋದಿ, ಸಂತೋಷ್ ಬಿಲಗುಂದಿ, ಹರ್ಷಾನಂದ್ ಗುತ್ತೇದಾರ್, ಡಾ. ಡಿ.ಜಿ. ಸಾಗರ್, ಗಂಗಪ್ಪಗೌಡ ಬಿ. ಪಾಟೀಲ್, ಸೂರ್ಯಕಾಂತ್ ಶೃಂಗೇರಿ, ಸುರೇಶ್ ಶರ್ಮಾ, ಅರ್ಜುನ್ ಭದ್ರೆ, ಡಾ. ಮೀನಾಕ್ಷಿ ಬಾಳಿ, ರವಿ ಚವ್ಹಾಣ್, ವಿಜಯಕುಮಾರ್ ಜಿ. ರಾಮಕೃಷ್ಣ ಮುಂತಾದವರು ಆಗಮಿಸುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಗಂಗಪ್ಪಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಬೋಧನಕರ್, ಉಪಾಧ್ಯಕ್ಷ ಲಕಪತಿ ಸಿಂಗೆ, ಸಹ ಕಾರ್ಯದರ್ಶಿ ಸುಭಾಷ್ ಬೋಧನಕರ್, ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ್ ಕಾಂದೆ, ಹಣಮಂತ್ ಪೂಜಾರಿ, ಪ್ರಕಾಶ್ ನರೋಣಾ ಮುಂತಾದವರು ಉಪಸ್ಥಿತರಿದ್ದರು.