ಬೋಟ್ ದುರಂತ: ಮೂವರು ಮೀನುಗಾರರ ಮೃತದೇಹ ಪತ್ತೆ

ಮಂಗಳೂರು, ಎ.೧೭- ನವಮಂಗಳೂರು ಬಂದರಿಂದ ೪೩ ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮತ್ತು ಮೀನುಗಾರಿಕೆ ದೋಣಿ ನಡುವೆ ಸಮುದ್ರದ ಮಧ್ಯದಲ್ಲಿ ಸಂಭವಿಸಿದ ಅವಘಡದಲ್ಲಿ ನಾಪತ್ತೆಯಾದ ಮೀನುಗಾರರ ಪತ್ತೆಗೆ ಶೋಧಕಾರ್ಯ ಮುಂದುವರಿದ್ದು ಶುಕ್ರವಾರ ಮೂವರ ಮೃತದೇಹವನ್ನು ನೌಕಾಪಡೆ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ.
ಏಪ್ರಿಲ್ ೧೧ ರಂದು ಕೇರಳದ ಕೋಳಿಕ್ಕೋಡ್ ಜಿಲ್ಲೆಯ ಬೇಪೋರ್‌ನಿಂದ ರಾತ್ರಿ ೧೧ ಗಂಟೆಗೆ ಹೊರಟ ಮೀನುಗಾರಿಕಾ ದೋಣಿಯಲ್ಲಿ ೧೪ ಮೀನುಗಾರರು ಇದ್ದರು. ಮಂಗಳೂರು ಕರಾವಳಿಯಿಂದ ೪೩ ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮಂಗಳವಾರ ಸುಮಾರು ನಸುಕಿನ ಜಾವ ೨.೩೦ ಗಂಟೆಗೆ ಸಿಂಗಾಪುರ ಮೂಲದ ಹಡಗಿಗೆ ದೋಣಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಮೂವರು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿತ್ತು. ಈ ಪೈಕಿ ೯ ಮಂದಿ ನಾಪತ್ತೆಯಾಗಿದ್ದರು. ಹೀಗಾಗಿ ನೌಕಾಪಡೆ,ಕೋಸ್ಟ್‌ಗಾರ್ಡ್ ಹಾಗೂ ಕೇರಳದ ಮುಳುಗು ತಜ್ಞರ ಪಡೆ ಮುಳುಗಡೆಯಾದ ದೋಣಿ ಹಾಗೂ ಸಮುದ್ರದಾಳದಲ್ಲಿ ನಿರಂತರವಾಗಿ ಶೋಧ ಮುಂದುವರಿಸಿತ್ತು. ಈ ಸಂದರ್ಭ ದೋಣಿ ಸಮೀಪವೇ ಮತ್ತೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹವನ್ನು ಮಂಗಳೂರಿಗೆ ತರಲಾಗಿದ್ದು, ಕೋಸ್ಟಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮೂವರ ಮೃತದೇಹ ದೊರೆತ ಕಾರಣ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ.