ಬೋಟ್ ದುರಂತ: ಇಬ್ಬರು ಮೀನುಗಾರರ ಅಂತ್ಯಕ್ರಿಯೆ


ಮಂಗಳೂರು, ಎ.೨೦- ವಾರದ ಹಿಂದೆ ಅರಬಿ ಸಮುದ್ರದಲ್ಲಿ ನಡೆದ ಬೋಟ್ ದುರಂತದಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳ ಮೂಲದ ಇಬ್ಬರು ಮೀನುಗಾರರ ಅಂತ್ಯಕ್ರಿಯೆಯನ್ನು ಸೋಮವಾರ ನಗರದ ಅತ್ತಾವರ ನಂದಿಗುಡ್ಡೆ ಸ್ಮಶಾನ ಭೂಮಿಯಲ್ಲಿ ನಡೆಸಲಾಯಿತು.
ಪಶ್ಚಿಮ ಬಂಗಾಳದ ಸುಬಲ್ ದಾಸ್ (೪೫) ಮತ್ತು ಇನ್ನೋರ್ವ ಸುಬುಲ್ ದಾಸ್ (೩೮) ಎಂಬವರ ಅಂತ್ಯಕ್ರಿಯೆಯನ್ನು ಮಂಗಳೂರಿನಲ್ಲೇ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರ ಕುಟುಂಬವು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದ್ದು, ಮೃತದೇಹವನ್ನು ಕೊಂಡೊಯ್ಯಲು ಸಾಧ್ಯವಾಗದ ಕಾರಣ ಅತ್ತಾವರ ಸಮೀಪದ ನಂದುಗುಡ್ಡೆಯಲ್ಲಿ ಅಂತ್ಯಕ್ರಿಯೆ ನಡೆಸಿದರು ಎನ್ನಲಾಗಿದೆ. ಎ.೧೦ರಂದು ಕೇರಳದಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ‘ರಬಾ’ ಹೆಸರಿನ ಬೋಟ್ ಮುಂಬೈ ಕಡೆಗೆ ಸಾಗುತ್ತಿದ್ದ ಸರಕು ಸಾಗಣೆಯ ಹಡಗಿಗೆ ಎ.೧೧ರ ತಡರಾತ್ರಿ ಸುರತ್ಕಲ್ ಲೈಟ್ ಹೌಸ್‌ನಿಂದ ೪೨ ನಾಟಿಕಲ್ ಮೈಲ್ ದೂರದಲ್ಲಿ ಢಿಕ್ಕಿ ಹೊಡೆದಿತ್ತು. ಬೋಟ್‌ನಲ್ಲಿ ಒಟ್ಟು ೧೪ ಮಂದಿಯಿದ್ದರು. ಈ ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದರೆ ೬ ಮಂದಿ ಮೃತಪಟ್ಟಿದ್ದರು. ಉಳಿದ ೬ ಮಂದಿ ಕಾಣೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.