ಬೋಟ್‌ನಲ್ಲಿ ಸಿಲಿಂಡರ್‌ ಸ್ಫೋಟ

೧೧ ಮಂದಿ ಮೀನುಗಾರರನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್ | ಘಟನೆಯಲ್ಲಿ ಒಬ್ಬರು ಗಂಭೀರ ಗಾಯ
ಮಂಗಳೂರು, ಜ.೧೧- ಮಂಗಳೂರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೂಲದ ಬೋಟ್‌ನಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಬೋಟ್‌ನಲ್ಲಿದ್ದ ೧೧ ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯವರು ರಕ್ಷಿಸಿದ್ದಾರೆ.


ಮಂಗಳೂರಿನಿಂದ ಸುಮಾರು ೧೪೦ ನಾಟಿಕಲ್ ಮೈಲ್ ದೂರದಲ್ಲಿ ಈ ಬೋಟ್ ಮೀನುಗಾರಿಕೆಯಲ್ಲಿ ತೊಡಗಿತ್ತು. ಈ ವೇಳೆ ಬೋಟ್‌ನಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದರು. ಈ ಸಂದರ್ಭ ಬೋಟ್‌ನಲ್ಲಿದ್ದವರು ಕೋಸ್ಟ್‌ಗಾರ್ಡ್‌ಗೆ ಅಪಾಯದ ಸಂದೇಶ ಕಳುಹಿಸಿದ್ದರು. ವಿಷಯ ತಿಳಿದ ಕೂಡಲೇ ಮುಂಬೈ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಿ ಕೊಡಲಾಯಿತು. ಅಲ್ಲದೆ ಅಪಾಯಕ್ಕೆ ಸಿಲುಕಿದ್ದ ಬೋಟ್‌ನ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನು ಕಳುಹಿಸಲಾಯಿತು. ಕೆಲವೇ ಸಮಯದಲ್ಲಿ ಬೋಟ್ ಜೊತೆ ಸಂಪರ್ಕ ಸಾಧಿಸಿ, ಮೀನುಗಾರರಿಗೆ ಧೈರ್ಯ ತುಂಬಲಾಯಿತು. ಘಟನಾ ಸ್ಥಳಕ್ಕೆ ಕೋಸ್ಟ್ ಗಾರ್ಡ್ ನೌಕೆಗಳೆರಡೂ ತಲುಪಿದ್ದು, ತೀವ್ರ ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆಗೆ ಒಳಪಡಿಸಿ ಕೋಸ್ಟ್‌ಗಾರ್ಡ್ ನೌಕೆಗೆ ಸ್ಥಳಾಂತರಿಸಲಾಯಿತು. ಬಳಿಕ ಈತನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಜೊತೆಗೆ ಮೂವರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದೆ. ಉಳಿದವರು ಬೋಟ್‌ನಲ್ಲೇ ಉಳಿದಿದ್ದು, ಸುರಕ್ಷಿತವಾಗಿದ್ದಾರೆಂದು ಕೋಸ್ಟ್ ಗಾರ್ಡ್ ಮೂಲಗಳಿಂದ ತಿಳಿದು ಬಂದಿದೆ.