ಬೋಗಸ್ ಬಿಲ್ ಬರೆಯಲು ಒಪ್ಪದಿದ್ದಾಗ ಪಿಡಿಒಗೆ ಧಮ್ಕಿ|ರೇವೂರ(ಬಿ) ಠಾಣೆಯಲ್ಲಿ ಮೂವರ ವಿರುದ್ಧ ಎಫ್‍ಐಆರ್

Oplus_131072

ಅಫಜಲಪುರ: ಏ.5:ಬೋಗಸ್ ಬಿಲ್ ಸೃಷ್ಟಿಸಿ ಚೆಕ್ ಬರೆದು ಕೊಡಿ ಎಂದು ಪಿಡಿಒಗೆ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ ನಮ್ಮ ಕಡೆಯ ಜನರನ್ನು ಕರೆಸಿ ನಿಮಗೆ ಹೊಡೆಸುತ್ತೇನೆ ಎಂದು ಪಿಡಿಒಗೆ ಧಮ್ಕಿ ಹಾಕಿರುವ ಗ್ರಾಪಂ ಅಧ್ಯಕ್ಷೆ ಸೇರಿ ಪತಿ, ಮೈದುನ(ಪತಿಯ ತಮ್ಮ) ಹೀಗೆ ಮೂರು ಜನರ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.

ತಾಲೂಕಿನ ಅತನೂರ ಗ್ರಾಪಂ ಪಿಡಿಒ ಅನುಸೂಯಾ ಅಷ್ಟಗಿ ಅವರು ರೇವೂರ(ಬಿ) ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾರ್ಚ್ 27ರಂದು ಅತನೂರ ಗ್ರಾಪಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಕಾಂಬಳೆ, ಅವರ ಪತಿ ನಾಗೇಶ್ ಕಾಂಬಳೆ ಮತ್ತು ಅವರ ಮೈದುನ(ಪತಿಯ ತಮ್ಮ) ಸುಧಾಕರ ಕಾಂಬಳೆ ಎಂಬುವವರು ಏಕಾಏಕಿ ಗ್ರಾಪಂಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಮೂರು ಜನ ಸೇರಿ ಬೋಗಸ್ ಬಿಲ್ ಮಾಡುವಂತೆ ಹೇಳಿದ್ದಾರೆ.

ಒಂದು ವೇಳೆ ಮಾಡದಿದ್ದರೆ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಹೊಡೆಯುವುದಾಗಿ ಗ್ರಾಪಂ ಟೇಬಲ್ ಬಡಿದು ಬೆರಳು ತೋರಿಸಿ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದ್ದಲ್ಲದೇ ಗೂಂಡಾ ವರ್ತನೆ ತೋರಿರುತ್ತಾರೆ. ಅಲ್ಲದೇ ನಿನ್ನಂತಹ ಅಧಿಕಾರಿಗಳನ್ನು ಎಷ್ಟು ಜನ ನೋಡಿಲ್ಲ. ನಾವು ಮನಸ್ಸು ಮಾಡಿದರೆ 10 ಜನರನ್ನು ಕರೆಸಿ ನಿಮಗೆ ಹೊಡೆಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.