ಬೊರವೆಲ್ ಕೊರೆಸಲು ಒಂದು ಕೋಟಿ ಅನುದಾನ ಕೊಡಿ. ಉಜನಿಯಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಿ: ಸರಕಾರಕ್ಕೆ ಎಂ.ವೈ.ಪಾಟೀಲ ಒತ್ತಾಯ

ಅಫಜಲಪುರ:ಮಾ.30: ಪ್ರತಿಯೊಂದು ತಾಲೂಕಿಗೆ ಕುಡಿಯುವ ನೀರಿಗಾಗಿ ಬೊರವೆಲ್ ಕೊರೆಯಿಸಲು ಶೀಘ್ರದಲ್ಲಿ ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಎಂ.ವೈ.ಪಾಟೀಲ ಸರಕಾರಕ್ಕೆ ಒತ್ತಾಯಿಸಿದರು. ಪ್ರವಾಸಿ ಮಂದಿರದಲ್ಲಿ ರವಿವಾರ ಮದ್ಯಾಹ್ನ 2 ಗಂಟೆಗೆ ಕರೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭೀಮಾ ನದಿ, ಅಮರ್ಜಾ, ಬೋರಿ ನದಿಗಳಲ್ಲಿ ಈಗಾಗಲೆ ನೀರಿನ ಅಭಾವವುಂಟಾಗಿದೆ. ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸರಕಾರದ ಮೇಲೆ ಒತ್ತಡ ತರಬೇಕೆಂದು ಹೇಳಿದರು. ಅಲ್ಲದೆ ಕೃಷ್ಣಾ ನದಿಯ ಆಲಮಟ್ಟಿ ಡ್ಯಾಂನಿಂದ ಕಾಲುವೆ ಮೂಲಕ ಭೀಮಾ ನದಿಗೆ ನೀರು ಹರಿಸಬೇಕು. ಈಗಾಗಲೆ ಬೇಸಿಗೆ ಆರಂಭವಾಗಿದ್ದರಿಂದ ನದಿ ತೀರದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಅಲ್ಲದೆ ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಗಾಣಗಾಪೂರ ಮತ್ತು ಕಲಬುರಗಿ ನಗರದ ನೀರಿನ ಕೊರತೆ ನೀಗಿಸಬಹುದಾಗಿದೆ. ಈ ವಿಷಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಈ ಹಿಂದೆ ಸರಕಾರ ಜಲ ಮೂಲ ಇಲ್ಲದ ಕಡೆ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳು ಕೈಗೊಂಡಿದ್ದು, ಆ ಕಾಮಗಾರಿಗಳು ಹಾಳಾಗಿವೆ. ಒಂದೇ ಒಂದು ಹನಿ ನೀರು ಗ್ರಾಮಗಳಿಗೆ ಹರಿದಿಲ್ಲ. ಕಾಮಗಾರಿಗಾಗಿ ಮಾಡಿದ ಅನುದಾನ ವ್ಯರ್ಥ ಖರ್ಚಾಗಿ ಹೋಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯಿಲ್ಲದೆ ಶೇ.80% ರಷ್ಟು ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಶೇ.20% ರಷ್ಟು ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೆ ಗುತ್ತಿಗೆ ಪಡೆದ ಗುತ್ತಿಗೆದಾರರು ಹಣ ಎತ್ತಿಕೊಂಡು ಹೋಗಿದ್ದಾರೆ. ನಿರ್ವಹಣೆಯಿಲ್ಲದೆ ಸರಕಾರದ ಹಣ ಪೋಲಾಗಿದೆ. ಈ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ. ಇನ್ನೂ ಮುಂದೆ ನೀರಿನ ಘಟಕಗಳ ನಿರ್ವಹಣೆಗಾಗಿ ಟೆಂಡರ್ ಕರೆಯುತ್ತಾರೆಂದು ತಿಳಿಸಿದರು.

ನೀರಿನ ಮೂಲವಿರುವ 36 ಗ್ರಾಮಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಈ ಗ್ರಾಮಗಳ ಮನೆ ಮನೆಗಳ ನಲ್ಲಿಗಳಿಗೆ ನೇರವಾಗಿ ನೀರು ಹರಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಫಜಲಪುರ ಪಟ್ಟಣಕ್ಕೆ ಭೀಮಾ ಡ್ಯಾಂನಿಂದ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗಾಗಿ 60 ಕೋಟಿ ಅನುದಾನ ಬಿಡುಗಡೆಯಾಗಿ ಈಗಾಗಲೆ ಟೆಂಡರ್ ಕರೆದಿದ್ದು, ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ. ಪಟ್ಟಣಕ್ಕೆ ಕೇವಲ ಕುಡಿಯುವ ನೀರಿನ ಯೋಜನೆ ಒಂದೇ ಸಾಲದು. ಮೊದಲು ಒಳಚರಂಡಿ ಕಾಮಗಾರಿಗಾಗಿ ಸರಕಾರಕ್ಕೆ ಮತ್ತು ಜಲ ಮಂಡಳಿಗೆ 30 ಕೋಟಿ ಹಾಗೂ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ಅವರಿಗೆ 25 ಕೋಟಿ ರೂ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಅವರು ಕೂಡಾ ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಬಯಲು ಶೌಚ ಮುಕ್ತವಾಗಿಲ್ಲ. ಸಾರ್ವಜನಿಕರು ಇನ್ನೂ ಬಯಲಲ್ಲೆ ಶೌಚಕ್ಕೆ ಹೋಗುವುದು ಕಂಡು ಬರುತ್ತಿದೆ. ಆದರೆ ಅಧಿಕಾರಿಗಳು ಜಿಲ್ಲೆಯನ್ನು ಬಯಲು ಶೌಚಮುಕ್ತವಾಗಿದೆ ಎಂದು ಹೇಳಿ, ಪ್ರಶಸ್ತಿ ಪಡೆದುಕೊಂಡಿದ್ದು, ಕಂಡಾಗ ಆಶ್ಚರ್ಯವಾಗುತ್ತದೆ. ಪ್ರತಿಯೊಬ್ಬರು ಶೌಚಾಲಯದ ಅವಶ್ಯಕತೆ ಕುರಿತು ಯೋಚಿಸಬೇಕಾಗಿದೆ. ಬಯಲು ಶೌಚಕ್ಕೆ ಹೋಗುವುದರಿಂದ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎನ್ನುವುದನ್ನು ತಿಳಿದಿದ್ದರೂ ಕೂಡಾ ಸಾರ್ವಜನಿಕರು ಬಯಲು ಶೌಚಕ್ಕೆ ಹೋಗುವುದು ಸರಿಯಲ್ಲ. ಈ ಬಗ್ಗೆ ಮಾಧ್ಯಮದವರಾದ ತಾವು ಕೂಡಾ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಇಂದಿನ ರಾಜಕಾರಣ ದಾರಿ ತಪ್ಪುತ್ತಿದೆ: ಎಂ.ವೈ.ಪಾಟೀಲ

ರಾಜ್ಯದಲ್ಲಿ ರಾಜಕಾರಣ ದಾರಿ ತಪ್ಪುತ್ತಿದೆ ಎಂದು ಎಂ.ವೈ.ಪಾಟೀಲ ಹೇಳಿದರು. ಪ್ರವಾಸಿ ಮಂದಿರದಲ್ಲಿ ಕುಡಿಯುವ ನೀರಿನ ವಿಷಯದ ಕುರಿತು ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ನಂತರ ಮಾಧ್ಯಮ ಮಿತ್ರರು ಸಿ.ಡಿ ಪ್ರಕರಣ ಕುರಿತು ಮಾತಿಗೆಳೆದಾಗ, ನಸುನಕ್ಕ ಅವರು, ಏನು ಮಾಡುವುದು. ರಾಜಕಾರಣಿಗಳ ನಡೆಯ ಬಗ್ಗೆ ಜನಸಾಮಾನ್ಯರಲ್ಲಿ ಅಸಹ್ಯ ಹುಟ್ಟಿದೆ. ಕೇವಲ ಸಿ.ಡಿ ವಿಚಾರವನ್ನಿಟ್ಟುಕೊಂಡು, ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಕರೆದ ಅಧಿವೇಶನದಲ್ಲಿ ಅಮೂಲ್ಯ ಸಮಯ ವ್ಯರ್ಥ ಮಾಡಿದರು. ಯಾವುದೇ ಸಮಸ್ಯೆಗಳ ಮೇಲೆ ಚರ್ಚೆ ನಡೆಯಲಿಲ್ಲ. ಅಭಿವೃದ್ಧಿ ಕುರಿತು ಯಾವುದೇ ವಿಷಯಗಳ ಮೇಲೆ ಚಿಂತನ-ಮಂಥನವಾಗಲಿಲ್ಲ ಎಂದು ಶಾಸಕ ಎಂ.ವೈ.ಪಾಟೀಲ ಅಸಮಾಧಾನ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶರಣು ಕುಂಬಾರ, ಕಂಟೆಪ್ಪ ಬಳೂರ್ಗಿ ಇತರರಿದ್ದರು.