ಬೊಮ್ಮಾಯಿ ವಿರುದ್ಧ ದಿನೇಶ್ ಕಿಡಿ

ಬೆಂಗಳೂರು,ಜೂ.೭:ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುತ್ತ ತುದಿಗೆ ಏರಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಶೀಘ್ರದಲ್ಲೇ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರಬಹುದು ಎಂಬ ಮಾಜಿ ಮುಖ್ಯಮಂತ್ರಿಗಳ ಹೇಳಿಕೆಗೆ ಸರಣಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಬೊಮ್ಮಾಯಿರವರನ್ನು ನಾನು ಪ್ರಜ್ಞರು ಮತ್ತು ಪ್ರತಿಭಾವಂತರು ಎಂದು ಭಾವಿಸಿದ್ದೆ. ಆದರೆ ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಜನತಾ ಪರಿವಾರದ ಬೊಮ್ಮಾಯಿರವರು ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುತ್ತ ತುದಿಗೆ ಏರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ತಪ್ಪೇ ಎಂದು ಪ್ರಶ್ನಿಸಿರುವ ದಿನೇಶ್ ಗುಂಡೂರಾವ್‌ರವರು, ಯುಪಿಎ ಅವಧಿಯಲ್ಲಿ ಕೆಲ ಅಪರಾಧಿಗಳಿಗೆ ರಕ್ಷಣೆ ಮಾಡಲಾಗಿತ್ತು ಎಂಬ ನಿಮ್ಮ ಹೇಳಿಕೆ ಸರಿಯಲ್ಲ. ಯಾವ ಅಪರಾಧಿಯ ರಕ್ಷಣೆಯಾಗಿದೆ ಹೇಳಿ, ನಾರಾಯಣ ರಾಣೆ, ಸುವೆಂದು ಅಧಿಕಾರಿಯನ್ನು ಮಹಾ ಭ್ರಷ್ಟರೆಂದು ಬಿಂಬಿಸಿದ್ದು ಬಿಜೆಪಿಯೇ, ಈಗ ಪಕ್ಷದ ಸದಸ್ಯರು ಬೇರೆ ಪಕ್ಷದಲ್ಲಿದ್ದಾಗ ಮಹಾ ಭ್ರಷ್ಟರು, ಈಗ ಅವರೇನು ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.