ಬೊಮ್ಮಾಯಿ ಮತ್ತೆ ಜೆಡಿಎಸ್‍ಗೆ ಬಂದರೆ ಸ್ವಾಗತ: ಇಬ್ರಾಹಿಂ


ಹುಬ್ಬಳ್ಳಿ, ನ 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ಜೆಡಿಎಸ್ ಪಕ್ಷಕ್ಕೆ ಬಂದರೆ ಅವರನ್ನು ಸ್ವಾಗತಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ವಿಷಯದಲ್ಲಿ ತಾವು ಮತ್ತು ಬಸವರಾಜ ಬೊಮ್ಮಾಯಿಯವರು ಸೇರಿ ಸೂಕ್ತ ನಿರ್ಧಾರವನ್ನು ಕೈಕೊಂಡಿದ್ದೆವು ಎಂದು ನೆನಪಿಸಿಕೊಂಡರಲ್ಲದೇ, ಇದೀಗ ಬಿಜೆಪಿ ಸೇರಿರುವ ಬೊಮ್ಮಾಯಿ ತಬ್ಬಲಿ ಆಗಿದ್ದಾರೆ ಎಂದು ವ್ಯಂಗವಾಡಿದರು.
ಬಿಜೆಪಿ ಆಡಳಿತದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸದ್ಯ ಮುಖ್ಯಮಂತ್ರಿಗಳ ಸ್ಥಿತಿ 2ಎ, ಎಸ್.ಸಿ.,ಎಸ್.ಟಿ ಹಾಗೂ ಕುರುಬ ಸಮಾಜದ ಮೀಸಲಾತಿ ವಿಚಾರಗಳ ನಡುವೆ ಸಿಲುಕಿ ತೊಳಲಾಡುವಂತಾಗಿದೆ ಎಂದು ಅವರು ನುಡಿದರು.
ಬೇಡುವ ಸ್ಥಾನದಲ್ಲಿದ್ದಾರೆ:
ಧಾರವಾಡ ಜಿಲ್ಲೆಯಲ್ಲಿ ಬಸವರಾಜ ಹೊರಟ್ಟಿ ಹಾಗೂ ಎನ್.ಎಚ್. ಕೋನರಡ್ಡಿ ಅವರುಗಳು ಹಿಂದೆ ಕೊಡುವ ಸ್ಥಾನದಲ್ಲಿದ್ದರು. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಹೋಗಿ `ಬೇಡುವ’ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಇಬ್ರಾಹಿಂ ಕಟಕಿಯಾಡಿದರು.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸೋಲು ಖಚಿತ ಎಂದ ಅವರು, ಸಿದ್ಧರಾಮಯ್ಯನವರ ಮೇಲೆ ತಮಗೆ ಪ್ರೀತಿಯಿದೆ. ಹೀಗಾಗಿ ಅವರು ಕೋಲಾರ ಬಿಟ್ಟು ವರುಣಾದಲ್ಲಿಯೇ ಸ್ಪರ್ಧಿಸಲು ಸಲಹೆ ನೀಡುವುದಾಗಿ ತಿಳಿಸಿದರು.
ಜೆ.ಡಿ.ಎಸ್ ಶಿಕ್ಷಣ, ಆರೋಗ್ಯ, ನೀರಾವರಿಯಂಥ ವಿಷಯಗಳನ್ನು ಮುಂದಿರಿಸಿಕೊಂಡು ಪಂಚರತ್ನ ಯಾತ್ರೆ ನಡೆಸುತ್ತಿದೆ ಎಂದ ಅವರು, ನದಿಗಳ ನೀರಿನ ಸದ್ಬಳಕೆ, ಗ್ರಾಮಮಟ್ಟದಲ್ಲಿ ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗ, ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆ ಮಾಡಿ ಹೆಚ್ಚು ಉತ್ಪನ್ನ ಬೆಳೆವ ಯೋಜನೆ ಜಾರಿಗೆ ತರಲಾಗುವುದು ಎಂದು ನುಡಿದರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೆ ದಿ. ನಂಜುಂಡ್ಪನವರು ನೀಡಿದ ವರದಿಯಂತೆ ರೈತರಿಗೆ ಬೆಂಬಲ ಬೆಲೆ ನೀಡಲಾಗುವುದು ಎಂದು ಅವರು ಹೇಳಿದರು.