ಬೊಮ್ಮಾಯಿ ಏಕಾಂಗಿ

ಬೆಂಗಳೂರು, ಮಾ. ೨೩- ರಾಸಲೀಲೆ ಸಿಡಿ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕರ ವಿಧಾನಸಭೆಯಲ್ಲಿ ಧರಣಿ ನಡೆಸಿ ಕೋಲಾಹಲ ವಾತಾವರಣ ಉಂಟು ಮಾಡಿ, ಕಲಾಪಕ್ಕೆ ಅಡ್ಡಿಪಡಿಸಿದ ಸಂದರ್ಭದಲ್ಲಿ ಗೃಹ, ಸಚಿವ ಬಸವರಾಜ ಬೊಮ್ಮಾಯಿ ಹೊರತುಪಡಿಸಿ ಉಳಿದ ಸಚಿವರು ಹಾಗೂ ಶಾಸಕರು ಮೌನಕ್ಕೆ ಶರಣಾಗಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆರಳುವಂತಾಗಿದೆ.
ಸಚಿವ ಬೊಮ್ಮಾಯಿ ಅವರೊಬ್ಬರೇ ಸರ್ಕಾರದ ಪರವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದು ಯಾವುದೇ ಸಚಿವರು ಚಕಾರವೆತ್ತದಿರುವುದನ್ನು ಗಮನಿಸಿದ ಬಿಎಸ್‌ವೈರವರು ಸರ್ಕಾರದ ಪರವಾಗಿ ನಿಂತು ಪರಿಸ್ಥಿತಿಯನ್ನು ಎದುರಿಸುವಂತೆ ತಾಕೀತು ಮಾಡಿದರು.
ಇಂದು ೨ನೇ ಬಾರಿಗೆ ಸಭಾಧ್ಯಕ್ಷರು ಸದನವನ್ನು ಮುಂದೂಡಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಸಚಿವರನ್ನು ವಿಧಾನ ಸಭೆಯ ಮೊಗಸಾಲೆಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡು ಬೊಮ್ಮಾಯಿ ಮಾತ್ರ ಸರ್ಕಾರ ಸಮರ್ಥನೆ ಮಾಡುತ್ತಿದ್ದಾರೆ, ನೀವೆಲ್ಲ ಏನು ಮಾಡುತ್ತಿದ್ದೀರಿ. ತಾರ್ಕಿಕವಾಗಿ ಕಾಂಗ್ರೆಸ್‌ನ್ನು ಸದನದಲ್ಲಿ ಎದುರಿಸಿ ಎಂದು ಸೂಚನೆ ನೀಡಿದರು ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಸಿ.ಡಿ. ವಿಚಾರವನ್ನು ಮುಂದಿಟ್ಟುಕೊಂಡು ಇಂದು, ನಾಳೆ ಧರಣಿ ನಡೆಸುವುದು ಖಚಿತವಾಗಿದೆ. ಹಾಗಾಗಿ ಎಲ್ಲ ಸಚಿವರುಗಳು ಒಟ್ಟಾಗಿ ಸರ್ಕಾರದ ಸಮರ್ಥನೆಗೆ ನಿಂತು ಕಾಂಗ್ರೆಸ್‌ನ್ನು ಸಮರ್ಥವಾಗಿ ಎದುರಿಸಿ ಎಂದು ಮುಖ್ಯಮಂತ್ರಿಗಳು ಸಚಿವರುಗಳಿಗೆ ತಾಕೀತು ಮಾಡಿದರು ಎಂದು ಗೊತ್ತಾಗಿದೆ.