ಬೊಮ್ಮಾಯಿಯವರು ಉತ್ತಮ ಆಡಳಿತಗಾರರು:ಸೋಮಶೇಖರರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.28: ಮುಖ್ಯಮಂತ್ರಿಗಳಾಗಿ ಒಂದು ವರ್ಷ ಪೂರೈಸಿರುವ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತಗಾರರು ಎಂದು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಬಣ್ಣಿಸಿದ್ದಾರೆ.
ಅವರಿಂದು ತಮ್ಮ ನಿವಾಸದಲ್ಲಿ ಸಂಜೆವಾಣಿಯೊಂದಿಗೆ ಮಾತನಾಡುತ್ತಾ, ಬೊಮ್ಮಾಯಿ ಅವರು ನಮಗೆ ಸಹೋದರ ಸಮಾನರು ನಾನು ಅವರನ್ನು ಅಣ್ಣ ಎಂದೆ ಕರೆಯುವೆ. ಅವರ ಬಳಿ ಹೋದ ಎಲ್ಲಾ ಶಾಸಕರಿಗೂ ಅವರು ಆತ್ಮೀಯವಾಗಿ ಮಾತನಾಡಿಸಿ ಕ್ಷೇತ್ರದ ಕೆಲಸ ಕಾರ್ಯಗಳನ್ನು ಪೂರೈಸಿ ಕೊಡುವ ಉತ್ತಮ ಆಡಳಿತಗಾರರಾಗಿದ್ದಾರೆಂದರು.
ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿಶೇಷವಾಗಿ ಘೋಷಣೆ ಮಾಡಿದ್ದು, ಹಿಂದೂ ದೇವಾಲಯಗಳ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಆ ದೇವಾಲಯಗಳಲ್ಲೇ ಬಳಸುವಂತೆ ಮಾಡಿದ್ದು ಸೇರಿದಂತೆ ಅವರು ರಾಜ್ಯದ ಅಭಿವೃದ್ಧಿ ಕೈಗೊಂಡಿರುವ ಯೋಜನೆಗಳು ಗಮನಾರ್ಹವಾದವುಗಳಾಗಿವೆ ಎಂದರು.
ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಬಳಕೆಯಾಗದೇ ಇದ್ದ ಕೆ.ಎಂ.ಆರ್.ಸಿ. ನಿಧಿ ಬಳಕೆಗೆ ಕಾನೂನು ಮತ್ತು ಗಣಿ ಸಚಿವರ ಮೇಲೆ ಒತ್ತಡ ತಂದು ಸುಪ್ರೀಂ ಕೋರ್ಟಿನಲ್ಲಿ ವಿಶೇಷ ನ್ಯಾಯ ಪೀಠ ಸ್ಥಾಪನೆ ಮಾಡಿ ನಿಧಿ ಬಳಕೆಗೆ ಸಮಿತಿ ರಚನೆ ಮಾಡಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮಾಡಿದ್ದಾರೆ.
ಇದರಿಂದಾಗಿ ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ 270 ಕೋಟಿ ರೂ, ವಿಮ್ಸ್ ಆಸ್ಪತ್ರೆಯಲ್ಲಿ 550 ಬೆಡ್ ಗಳ ವಾರ್ಡ್ ಮಾಡಲು 120 ಕೋಟಿ ರೂ, ದೊರೆಯಲಿದೆಂದರು.
ನಗರೋಸ್ಥಾನದಡಿ 50 ಕೋಟಿ ರೂ, ಪಿಡ್ಲ್ಯೂಡಿಯಿಂದ 50 ಕೋಟಿ ರೂ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 125 ಕೋಟಿ ರೂ ದೊರೆತಿದೆ. ನಾವು ಯಾವುದೇ ಯೋಜನೆಗಳನ್ನು ತೆಗೆದುಕೊಂಡು ಹೋದರೆ ಅದಕ್ಕೆ ಸ್ಪಂದಿಸುವ ಮುಖ್ಯಮಂತ್ರಿಗಳಾಗಿದ್ದಾರೆ.
ಸದ್ಯದಲ್ಲೇ ಅವರು ಬಳ್ಳಾರಿಗೆ ಆಗಮಿಸಲಿದ್ದು ಜಿಲ್ಲಾಡಳಿತ ಭವನ, ಗಾಂಧಿಭವನ, ಮುಂಡ್ರಿಗಿ ಲೇಔಟ್ ಮೊದಲಾದವುಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ ನಗರದಲ್ಲಿ ಸರ್ಕಾರದ ನಿವೇಶನಗಳಲ್ಲಿ ವಾಸವಾಗಿದ್ದ 18 ರಿಂದ 20 ಸಾವಿರ ಕುಟುಂಬಗಳಿಗೆ ಪಟ್ಟಾವನ್ನು ಸಹ ಅವರು ವಿತರಿಸಲಿದ್ದಾರೆಂದರು.
ಇಷ್ಟೇ ಅಲ್ಲದೆ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬೃಹತ್ ಗೋಪುರ ನಿರ್ಮಾಣ, ರಾಜ್ ಕುಮಾರ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಮೊದಲಾದವುಗಳಿಗೆ ಭೂಮಿಪೂಜೆ ಮಾಡಲಿದ್ದಾರೆಂದು ತಿಳಿಸಿದರು.

Attachments area