ಬೊಬ್ಬೆ ಹೊಡೆದ ಹೋರಾಟಗಾರರು: ಜಿಲ್ಲಾಡಳಿತ, ಸರಕಾರದ ಅಣಕು ಶವ ಪ್ರದರ್ಶನ

ಮುದ್ದೇಬಿಹಾಳ :ಸೆ.3: ಪಟ್ಟಣದ ಭ್ರಷ್ಟ ಪುರಸಭೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಡಳಿತ ಹಾಗೂ ಸರಕಾರದ ಅಣಕು ಶವಗಳ ಪ್ರತಿಕೃತಿ ತಯಾರಿಸಿ ಪುರಸಭೆ ಎದುರಿಗೆ ಇಟ್ಟು ದಿನವೀಡಿ ಸದಸ್ಯರು ಶುಕ್ರವಾರ ವಿನೂತನ ರೀತಿಯಲ್ಲಿ ಧರಣಿ ನಡೆಸಿದರು.
ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ,ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ ಅವರು ಅಣಕು ಶವಗಳ ಮುಂದೆ ಬೊಬ್ಬೆ ಹೊಡೆದು ಗೋಳೋ ಎಂದು ಅತ್ತು ನಮ್ಮ ಪಾಲಿಗೆ ಜಿಲ್ಲಾಡಳಿತ,ಸರಕಾರ ಸತ್ತಿದೆ.ಅದಕ್ಕಾಗಿ ಅಣಕು ಶವದ ಪ್ರದರ್ಶನ ಮಾಡುತ್ತಿದ್ದೇವೆ.ಅನ್ಯಾಯವನ್ನು ಕಂಡೂ ಕಾಣದಂತೆ ಮೌನವಾಗಿರುವ ಜಿಲ್ಲಾಧಿಕಾರಿಗಳು ಭ್ರಷ್ಟರಿಗೆ ರಕ್ಷಣೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.ಸಂವಿಧಾನ ಬದ್ಧವಾಗಿ ಸರಕಾರಿ ಹುದ್ದೆಯಲ್ಲಿರುವವರು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಕೆಲಸ ನಡೆಯುತ್ತಿಲ್ಲ.ಇಂತಹ ಲಜ್ಜೆಗೇಡಿ ಅಧಿಕಾರಿ ವರ್ಗ,ಜನಪ್ರತಿನಿಧಿಗಳನ್ನು ನಾವು ನೋಡಿಲ್ಲ ಎಂದು ಸ್ಥಾಯಿ ಸಮಿತಿ ಸದಸ್ಯ ಶಿವು ಹರಿಜನ ಹೇಳಿದರು.ಈ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅಣಕು ಶವದ ಪ್ರದರ್ಶನ ವೀಕ್ಷಿಸಿದ್ದು ಕಂಡು ಬಂದಿತು.ಓರ್ವ ಎಎಸೈ,ಮೂವರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.ಧರಣಿ 46 ದಿನ ಪೂರೈಸಿದೆ.
ಎಸಿ,ಪಿಡಿ,ತಹಸೀಲ್ದಾರ್ ಸೇರಿದಂತೆ ಹಲವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ವರದಿ ಸಲ್ಲಿಸಿದ ಬಳಿಕ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದರು.ಆದರೆ ಈ ಎಲ್ಲ ಅಧಿಕಾರಿಗಳು ಹೇಳಿರುವ ಮಾತು ಹುಸಿಯಾಗಿದೆ.ಸರಕಾರದ ಸಂವಿಧಾನ ಬದ್ಧ ಅಧಿಕಾರದ ಖುರ್ಚಿಯಲ್ಲಿ ಕೂತಿರುವ ಇವರಿಗೆ ಅನ್ಯಾಯ ಕಣ್ಣ ಮುಂದೆ ನಡೆದಿದ್ದರೂ ಬಾಯಿ ಮುಚ್ಚಿಕೊಂಡು ಕೂತಿರುವುದನ್ನು ನೋಡಿದರೆ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡದೇ ಆಳುವ ವರ್ಗದ ಕೈಗೊಂಬೆಯಾಗಿದ್ದಾರೆ ಎಂದು ಸ್ಪಷ್ಟವಾಗುತ್ತಿದೆ.