
ನವದೆಹಲಿ, ಏ.೮- ಸಿಖ್ ಸಮುದಾಯದ ಪವಿತ್ರ ಬೈಸಾಖಿ ಆಚರಣೆ ನಾಳೆಯಿಂದ ಆರಂಭ ಹಿನ್ನೆಲೆಯಲ್ಲಿ ಪಾಕಿಸ್ತಾನವು ೨,೮೫೬ ವೀಸಾಗಳನ್ನು ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ನೀಡಿದೆ.
ಏಪ್ರಿಲ್ ೯ ರಿಂದ ೧೮ ರವರೆಗೆ ಪಾಕಿಸ್ತಾನದಲ್ಲಿ ಬೈಸಾಖಿ ಆಚರಣೆಗಳಿಗೆ ಸಂಬಂಧಿಸಿದ ವಾರ್ಷಿಕ ಉತ್ಸವಗಳಲ್ಲಿ ಭಾಗವಹಿಸಲು ಪಾಕಿಸ್ತಾನ ಹೈಕಮಿಷನ್ ೨,೮೫೬ ವೀಸಾಗಳನ್ನು ನೀಡಿದೆ. ಈ ಸಂದರ್ಭದಲ್ಲಿ ಯಾತ್ರಾರ್ಥಿಗಳು ಡೇರಾ ಸಾಹಿಬ್, ಪಂಜಾ ಸಾಹಿಬ್, ನಂಕಾನಾ ಸಾಹಿಬ್‌ಗೆ ಮತ್ತು ಕರ್ತಾರ್ಪುರ್ ಸಾಹಿಬ್ಗೆ ಹೋಗುತ್ತಾರೆ.
ಭಾರತೀಯ ಸಿಖ್ ಯಾತ್ರಾರ್ಥಿಗಳು ಭಾನುವಾರ ವಾಘಾ ಗಡಿ ಮೂಲಕ ಪಾಕಿಸ್ತಾನ ತಲುಪಲಿದ್ದು, ಅಲ್ಲಿ ಅವರನ್ನು ಸ್ವಾಗತಿಸಲಾಗುವುದು. ಆನಂತರ ಯಾತ್ರಾರ್ಥಿಗಳನ್ನು ವಿಶೇಷ ರೈಲಿನ ಮೂಲಕ ಪಂಜಾ ಸಾಹಿಬ್ ಹಸನ್ ಅಬ್ದಲ್‌ಗೆ ಕಳುಹಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಪ್ರತಿ ವರ್ಷ, ಭಾರತದಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಿಕರು ವಿವಿಧ ಧಾರ್ಮಿಕ ಹಬ್ಬಗಳು ಮತ್ತು ಸಂದರ್ಭಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.