“ಬೈಲೂರು ಗ್ರಾಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ”


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ10. ಈವರ್ಷ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಮೀಪದ ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಶ್ರೀ ಕೆ.ಮಲ್ಲಿಕಾರ್ಜುನ ಇವರನ್ನು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಗ್ರಾಮದ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಸೆ.06 ರಂದು ಮಂಗಳವಾರ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಕೆ.ಮಲ್ಲಿಕಾರ್ಜುನ ಮತ್ತು ಕಳೆದವರ್ಷ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾಗಿದ್ದ ಸಹಶಿಕ್ಷಕಿ ಶ್ರೀಮತಿ ಎಂ.ಎಸ್.ಮಮತ ಇವರನ್ನೂ ಇದೇವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಬಿ.ವೆಂಕಟೇಶ್, ಸಿ.ಲಿಂಗಪ್ಪ ಇವರು ಮಾತನಾಡಿ ನಮ್ಮ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮಹತ್ತರ ಪಾತ್ರ ವಹಿಸಿದ್ದಾರೆ. ಈ ದಿಶೆಯಲ್ಲಿ ಪ್ರಭಾರಿ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನಿರೀಕ್ಷಿತವಾಗಿತ್ತು ಎಂದು ತಿಳಿಸಿ ಅಭಿನಂದಿಸಿದರು.
    ನಂತರ ಪ್ರಶಸ್ತಿವಿಜೇತ ಶಿಕ್ಷಕರಾದ ಕೆ.ಮಲ್ಲಿಕಾರ್ಜುನ ಮಾತನಾಡಿ ಶಿಕ್ಷಕ ವೃತ್ತಿಯು ಪವಿತ್ರ ವೃತ್ತಿಯಾಗಿದ್ದು ಕಾಯಾ, ವಾಚಾ, ಮನಸಾ ಇಚ್ಚೆಯಿಂದ ನಾನು ಮತ್ತು ನಮ್ಮೆಲ್ಲಾ ಶಿಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಉತ್ತಮ ಶಿಕ್ಷಕ ಪ್ರಶಸ್ತಿಯು ಇನ್ನೂ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದೆ. ಯಾವತ್ತೂ ಶಾಲೆಗೆ ಪೋಷಕರು ಮತ್ತು ಗ್ರಾಮದ ಮುಖಂಡರು ಸಹಕಾರ ನೀಡಬೇಕೆಂದು ಕೋರಿ, ನಮ್ಮ ಕೆಲಸ ಗುರುತಿಸಿ ಊರಿನವರು ಸನ್ಮಾನಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಗೆ ಸ್ಥಳ ದಾನ ನೀಡಿದ ಮುಖಂಡರಾದ ರಂಗಾರೆಡ್ಡಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿಲಿಂಗಪ್ಪ, ಸದಸ್ಯರಾದ ತಿಮ್ಮಪ್ಪ, ಸಿಂದಿಗೇರಿ ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಲಿಂಗಪ್ಪ ಹಾಗೂ ಗ್ರಾಮಸ್ಥರು, ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 
ಫೋಟೊ: ಬೈಲೂರು ಸ.ಹಿ.ಪ್ರಾ.ಶಾಲೆಯಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿರುವುದು