ಬೈಲಹೊಂಗಲ ಬರಪೀಡಿತ ತಾಲೂಕು ಘೋಷಿಸಲು ಆಗ್ರಹಿಸಿ ಪ್ರತಿಭಟನೆ


ಬೈಲಹೊಂಗಲ,ಜೂ.27: ಬೈಲಹೊಂಗಲ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸುದ್ದಿಗರರೊಂದಿಗೆ ಮಾತನಾಡಿದ ರೈತ ಮುಖಂಡರು
ಸನ್ 2023 ರಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವ ಕಾರಣ ಮುಂಗಾರಿನ ಬೆಳೆಗಳು ಕೈಕೊಟ್ಟಿದ್ದು ಅನ್ನದಾತರು ಕಷ್ಟದಲ್ಲಿದ್ದಾರೆ. ತಾಲೂಕಿನಾದ್ಯಂತ ರೈತರು ಅಲ್ಪಸಲ್ಪ ಮಳೆ ನಂಬಿ ಸೋಯಾಬಿನ್, ಹತ್ತಿ, ಗೋಂಜಾಳ ಸೇರಿದಂತೆ ಬಗೆಯ ಬೀಜ ಬಿತ್ತನೆ ಮಾಡಿರುತ್ತಾರೆ. ಆದರೆ ಸಕಾಲಕ್ಕೆ ಮಳೆ ಬಾರದೆ ಕೈ ಕೊಟ್ಟಿದ್ದು, ಬಿತ್ತಿದ ಬೀಜ ಮೊಳಕೆ ಒಡೆಯದೆ ಭೂಮಿಯಲ್ಲಿ ಸೀದು ಹೋಗಿದೆ.
ರೈತರು ಬೀಜ ರಸಗೊಬ್ಬರ ಅಂತ ಸಾವಿರಾರು ರೂಪಾಯಿ ಖರ್ಚು ಮಾಡಿ ಕೈ ಸುಟ್ಟುಕೊಂಡು, ಸಾಕಷ್ಟು ಆರ್ಥಿಕವಾಗಿ ಶಕ್ತಿಹೀನರಾಗಿದ್ದಾರೆ.
ಅದಲ್ಲದೆ ಮುಂಬರುವ ದಿನಗಳಲ್ಲಿ ಮಳೆ ಬರುವುದೇ ಅಸಂಭವ ಆಗಿರುವುದರಿಂದ ದನ, ಕರುಗಳಿಗೆ ಮೇವಿನ ಅಭಾವ ಹಾಗೂ ಕುಡಿಯುವ ನೀರಿನ ಹಾಹಾಕಾರ ಏಳುವ ಸಾಧ್ಯತೆ ಇದೆ. ಕಾರಣ ಇವೆಲ್ಲ ವಾಸ್ತವಿಕ ಅಂಶಗಳನ್ನು ಗಮನಿಸಿ ಸರ್ಕಾರ ಬೈಲಹೊಂಗಲ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿರುವ ರೈತರಿಗೆ ಪ್ರತಿ ಎಕರೆಗೆ 50,000 ಪರಿಹಾರ ಘೋಷಿಸಿ, ರೈತರ ಸಾಲದ ಮನ್ನಾ ಮಾಡುವ ಕಡೆಗೆ ಸರ್ಕಾರ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ ಎಫ್. ರವರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಉಪವಿಭಾಗಧಿಕಾರಿಗಳ ಕಾರ್ಯಾಲಯದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರೈತರಿಗೆ ನ್ಯಾಯ ಕೊಡಿಸುವಂತೆ ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಾಳಪ್ಪ ಚಳಕೊಪ್ಪ, ವಿಠ್ಠಲ ಯಾಸನ್ನವರ, ಶಿವಾಜಿ ಖಂಡೋಜಿ, ಮಾಯಪ್ಪ ಹೆಗಡೆ, ಸೊಗಲಪ್ಪ ಶಿರವಂತಿ,ಮಡಿವಾಳಪ್ಪ ಹಿರೇಹೊಳಿ, ಅಜ್ಜಪ್ಪ ಕುರಿ,ಬಸವರಾಜ ಸುತಗಟ್ಟಿ, ನಾಗವ್ವ ಮಠಪತಿ, ಶಾಂತವ ಹಿರೇಮಠ ಸೇರಿದಂತೆ ತಾಲೂಕಿನ ರೈತ ಮುಖಂಡರು ಉಪಸ್ಥಿತರಿದ್ದರು.