ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವಾಗಿಸಲು ಆಗ್ರಹ


(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಆ.18: ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಸಭೆ ಸೇರಿದ ಹೋರಾಟಗಾರರು ಅಖಂಡ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದಾದರೆ ಆಡಳಿತಾತ್ಮಕ ದೃಷ್ಠಿಯಿಂದ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ಜಿಲ್ಲೆಯನ್ನಾಗಿಸಬೇಕು. ಇದು ನಮ್ಮ ಬೇಡಿಕೆ ಆಗಿದೆ ಎಂದರು.
ಜಿಲ್ಲಾ ಹೋರಾಟ ಸಮಿತಿ ಮುಖಂಡ ಶಿವರಂಜನ ಬೋಳನ್ನವರ ಮಾತನಾಡಿ, ‘ಬೆಳಗಾವಿ ಅಖಂಡವಾಗಿಯೇ ಇರಬೇಕು. ಇಲ್ಲವಾದರೆ ಬೈಲಹೊಂಗಲ ಜಿಲ್ಲೆ ಘೋಷಣೆ ಮಾಡಬೇಕು. ಎಲ್ಲ ರೀತಿಯಿಂದ ಅರ್ಹತೆ ಹೊಂದಿರುವ ಬೈಲಹೊಂಗಲ ಬ್ರಿಟಿಷ್ ಕಾಲದಿಂದಲೂ ಉಪವಿಭಾಗ ಸ್ಥಾನ ಹೊಂದಿದೆ. ಎಲ್ಲ ಸರ್ಕಾರಿ ಕಚೇರಿಗಳಿವೆ. ರಾಜಕಾರಣಿಗಳು ಅಖಂಡ ಬೆಳಗಾವಿ ಜಿಲ್ಲೆ ವಿಭಜನೆಗೆ ಪದೇ, ಪದೇ ಕೂಗು ಎತ್ತಿ ಕೆಣಕುತ್ತಿದ್ದಾರೆ. ಯಾವುದೇ ಜಿಲ್ಲೆ ಮಾಡಲಿ, ಬಿಡಲಿ, ಬೈಲಹೊಂಗಲ ಜಿಲ್ಲೆ ಆಗಲೇಬೇಕು. ಆಕಸ್ಮಾತವಾಗಿ ಘನನೆಗೆ ತೆಗೆದುಕೊಳ್ಳದೆ ಹೋದರೆ ನಾವು ಸುಮ್ಮನೆ ಇರಲ್ಲ. ಉಗ್ರ ಹೋರಾಟ ಮಾಡುತ್ತೇವೆ. ಅದಕ್ಕೆ ಏನೇ ಅನಾಹುತ ಆದರೆ ಹೇಳಿಕೆ ಕೊಟ್ಟವರು, ಸರ್ಕಾರವೇ ನೇರ ಜವಾಬ್ದಾರಿ ಆಗುತ್ತಾರೆ. ರಾಜಕಾರಣಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುವುದನ್ನು ಮೊದಲು ಬಿಟ್ಟು ಬಿಡಬೇಕು. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ರಾಜಕಾರಣಿಗಳು ಚುನಾವಣೆ ಆಗಿ ಆರಿಸಿ ಬಂದ ಮೇಲೆ ಒಂದು, ಅಧಿಕಾರ ಹೋದಾಗ ಒಂದು ರೀತಿಯಲ್ಲಿ ಬುದ್ದಿ ಭ್ರಮನೆಗೆ ಒಳಗಾಗುತ್ತಿದ್ದಾರೆ. ಇದರ ನಡುವೆ ಜನಸಾಮಾನ್ಯರು, ಸಾರ್ವಜನಿಕರು ಪ್ರಜಾಪ್ರಭುತ್ವ ಎನ್ನುವುದನ್ನೇ ಮರೆತು ಬಿಡುತ್ತಿದ್ದಾರೆ. ಯಾರನ್ನು ಕೇಳದೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ’ ಎಂದರು.
ಹೋರಾಟ ಸಮಿತಿ ಮುಖಂಡ ಮಹಾಂತೇಶ ತುರಮರಿ ಮಾತನಾಡಿ, ‘ಜಿಲ್ಲಾ ಹೋರಾಟ ಕೂಗು ಬಹಳ ದಿನಗಳಿಂದ ಇದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಬೈಲಹೊಂಗಲ ಜಿಲ್ಲೆ ಮಾಡದೆ ಹೋದರೆ ಸವದತ್ತಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರು ತಾಲ್ಲೂಕಿನ ಜನ ಸೇರಿ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಹೋರಾಟ ಸಮಿತಿ ಮುಖಂಡರಾದ ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ,ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ರುದ್ರಪ್ಪ ಹೊಸಮನಿ, ಬಿ.ಬಿ.ಗಣಾಚಾರಿ, ಮುರುಗೇಶ ಗುಂಡ್ಲೂರ, ಬಾಬು ಸುತಗಟ್ಟಿ, ಸುರೇಶ ವಾಲಿ, ಅನೇಕರು ಇದ್ದರು.