ಬೈಲಹೊಂಗಲಕ್ಕೆ ನಾಳೆ ಪ್ರಧಾನಿ ಮೋದಿ

ಬೈಲಹೊಂಗಲ,ಮೇ2: ಬೆಳಗಾವಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೈಲಹೊಂಗಲಕ್ಕೆ ಆಗಮಿಸಲಿದ್ದಾರೆ. ನಾಳೆ ಮಧ್ಯಾಹ್ನ 1ಕ್ಕೆ ಬೈಲಹೊಂಗಲದ ಬೈಲವಾಡ ಕ್ರಾಸ್‍ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಮತ್ತು ಕಲಘಟಗಿ, ಧಾರವಾಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದ್ದೂರಿ ಪ್ರಚಾರ ಸಭೆ ನಡೆಸಲಿದ್ದಾರೆ. ಸುಮಾರು 3 ಲಕ್ಷ ಜನರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಟ್ಟಣದ ಕಿತ್ತೂರ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ನೀಡಲಿದ್ದಾರೆ.ಬೈಲಹೊಂಗಲ ಸ್ವಾತಂತ್ರ್ಯ ಹೋರಾಟಗಾರರ ನಾಡಾಗಿರುವದರಿಂದ ಈ ಪಟ್ಟಣವನ್ನು ಪಧಾನಿ ಆಯ್ಕೆ ಮಾಡಿಕೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸಭಾಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಪ್ರಭಾಕರ ಕೋರೆ, ರಮೇಶ ಕತ್ತಿ, ರಮೇಶ ಜಾರಕಿಹೋಳಿ, ವಿವಿಧ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಅವರು ಹೇಳಿದರು.