ಬೈಪಾಸ್ ರಸ್ತೆ 2 ತಿಂಗಳಲ್ಲಿ ಪೂರ್ಣಗೊಳ್ಳಬೇಕು – ಆನಂದಸಿಂಗ್

ಹೊಸಪೇಟೆ ಏ28: ನಗರದ ಹೊರವಲಯದ ಜೋಳದ ರಾಶಿ ಗುಡ್ಡದ ಬಳಿ ಹಾದು ಹೋಗಿರುವ ಬೈಪಾಸ್ ರಸ್ತೆ ಕಾಮಗಾರಿ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಆನಂದಸಿಂಗ್ ಅಧಿಕಾರಿಗಳಿಗೆ ನಿನ್ನೆ ತಾಕೀತು ಮಾಡಿದರು.
ನಗರದ ಕಲ್ಲಳ್ಳಿಯ ಬಳಿ ಅಪೂರ್ಣಗೊಂಡ ಬೈಪಾಸ್ ರಸ್ತೆಯನ್ನು ಪರಿಶೀಲನೆ ನಡೆಸಿ, ಆರ್ಥಿಕ ವರ್ಷ 2016-17ರಲ್ಲಿ ಆರಂಭವಾದ ಬೈಪಾಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಈ ರಸ್ತೆಯಲ್ಲಿ ಸಂಭವಿಸಿದ ಅಫಘಾತ ಘಟನೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನೇರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿ ಅನಿರುದ್ಧ್ ಶ್ರವಣ್, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ ಎಚ್.ವಿಶ್ವನಾಥ, ಡಿವೈಎಸ್‍ಪಿ ರಘುಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಅಜೇಯ್ ಮಣಿಕುಮಾರ್, ಗ್ಯಾಮನ್ ಇಂಡಿಯಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.