ಬೈದಷ್ಟು ಕಮಲ ಅರಳುತ್ತೆ

ಪ್ರಧಾನಿ ಮತ ಬೇಟೆ
ಬೀದರ್,ಏ.೨೯:ಕಾಂಗ್ರೆಸ್ ಪಕ್ಷದವರು ನನ್ನನ್ನು ಇದುವರೆಗೂ ೯೧ ಬಾರಿ ಬೈದಿದ್ದಾರೆ. ಅವರು ಬೈದಷ್ಟು ಕಮಲ ಅರಳುತ್ತದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಾ ಪುರುಷರನ್ನೇ ನಿಂದಿಸುವ ಛಾಳಿ ಹೊಂದಿರುವ ಕಾಂಗ್ರೆಸ್ ನನ್ನನ್ನು ಬೈಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿಂದು ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಡಾ. ಬಿ.ಆರ್. ಅಂಬೇಡ್ಕರ್, ವೀರಸಾರ್ವಕರ್ ಅವರಂತಹ ಮಹಾ ಪುರುಷರನ್ನು ನಿಂದಿಸಿದೆ. ಈಗ ನನ್ನನ್ನು ಬೈಯಲು ಆರಂಭಿಸಿದೆ.ಚೌಕಿದಾರ್ ಚೋರ್, ಓಬಿಸಿ ಚೋರ್, ಮೋದಿ ಚೋರ್, ಈಗ ಲಿಂಗಾಯತ ಚೋರ್ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ನನ್ನನ್ನು ಎಷ್ಟೇ ಬೈದರೂ ನಾನು ಜನಸೇವೆಯನ್ನು ಮುಂದುವರೆಸುವೆ. ಕಾಂಗ್ರೆಸ್‌ನವರ ಬೈಗುಳಕ್ಕೆ ಲಿಂಗಾಯತ ಸಮುದಾಯ ತಕ್ಕ ಉತ್ತರ ನೀಡುತ್ತಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತಗಳ ಮೂಲಕ ಜನತೆ ಪಾಠ ಕಲಿಸುವರು ಎಂದರು.
ಕಾಂಗ್ರೆಸ್‌ನವರು ನನ್ನ ಮೇಲೆ ಎಷ್ಟೇ ಕೆಸರೆರಚಿ ನನ್ನನ್ನೂ ನಿಂದಿಸಿದಾಗಲೆಲ್ಲ ಅವರಿಗೆ ಶಿಕ್ಷೆಯಾಗಿದೆ. ಅವರು ನನ್ನನ್ನು ಎಷ್ಟೇ ಬೈದರೂ ನಾನು ಮಾತ್ರ ಜನತಾ ಜನಾರ್ಧನ ಸೇವೆಗೆ ಬದ್ಧನಾಗಿ ಕೆಲಸ ಮಾಡುತ್ತೇನೆ. ನಿಮ್ಮಗಳ ಆರ್ಶೀವಾದಗಳಿಂದ ಅವರ ಬೈಗುಳ ಮಣ್ಣಲ್ಲಿ ಮಣ್ಣಾಗುತ್ತೆ, ಅವರು ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ ಎಂದರು.
ಕಾಂಗ್ರೆಸ್‌ನವರು ನನ್ನನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನಾನಂತೂ ಜನ ಸೇವೆಗೆ ಜೀವನ ಮುಡುಪಾಗಿಟಿದ್ದೇನೆ. ಹಗಲು-ರಾತ್ರಿ ನಿಮ್ಮ ಸೇವೆಗೆ ದುಡಿಯುತ್ತೇನೆ ಎಂದು ಮೋದಿ ಹೇಳಿದರು.
ಕರ್ನಾಟಕವನ್ನು ನಂ ಒನ್ಮಾ ಡಲು ಮೋದಿ ಶಪಥ
ಕರ್ನಾಟಕ ರಾಜ್ಯವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿ ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಈ ಚುನಾವಣೆ ಕೇವಲ ೫ ವರ್ಷಕ್ಕೊಮ್ಮೆ ಮಾತ್ರ ಸರ್ಕಾರ ರಚಿಸುವುದಕ್ಕಷ್ಟೇ ಸಿಮೀತವಾಗುವುದಿಲ್ಲ. ರಾಜ್ಯವನ್ನು ದೇಶದಲ್ಲೇ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆಯಾಗಿದೆ ಎಂದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ಜಗದ್ಗುರು ಬಸವೇಶ್ವರ ಶಿವಶರಣರಿಗೆ ನನ್ನ ನಮಸ್ಕಾರಗಳು ಎಂದು ಹೇಳಿ ನನ್ನ ಚುನಾವಣೆ ಯಾತ್ರೆ ಬೀದರ್ ನಿಂದ ಆರಂಭವಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಬಸವೇಶ್ವರರ ಅನುಗ್ರಹ ತಮಗೆ ಶಕ್ತಿ ತುಂಬಲಿದೆ. ರಾಜ್ಯದ ಕಿರೀಟ ಬೀದರ್ ಜನತೆಯ ಆಶೀರ್ವಾದ ಸಿಕ್ಕಿದೆ ಎಂದು ಹೇಳಿದರು.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಈ ಸಮಾವೇಶಕ್ಕೆ ಬಂದು ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ, ಈ ಬಾರಿ ನಿರ್ಧಾರ ಬಹುಮತ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಮೋದಿ ಹೇಳಿದ್ದು ವಿಶೇಷವಾಗಿತ್ತು.
ಕರ್ನಾಟಕವನ್ನು ಕಾಂಗ್ರೆಸ್‌ನ ಎಟಿಎಂ ಆಗಲು ಅವಕಾಶ ಮಾಡಿಕೊಡಬೇಡಿ. ಬಿಜೆಪಿಯನ್ನು ಗೆಲ್ಲಿಸಿ ಅಭಿವೃದ್ಧಿಗೆ ಮುನ್ನುಡಿ ಬರೆಯಿರಿ ಎಂದು ಮೋದಿ ಹೇಳಿದರು.
ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ವೇಗದಿಂದ ಸಾಗಿದೆ. ಇದರಿಂದ ಬೀದರ್ ನಲ್ಲಿ ಏತನೀರಾವರಿ ಯೋಜನೆ ಸೇರಿದಂತೆ ಇನ್ನಿತರ ಕಾಮಗಾರಿಗಳು ವೇಗವಾಗಿ ಸಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತಾಪಿ ವರ್ಗಕ್ಕೆ ಸಾಕಷ್ಟು ನೆರವಾಗಿದೆ. ಈ ಯೋಜನೆ ಆರಂಭಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿ ಯೋಜನೆ ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ತಮ್ಮ ಭಾಷಣದುದ್ದಕ್ಕೂ ಡಬಲ್ ಇಂಜಿನ್ ಸರ್ಕಾರದ ಸಾಧನೆಯು ಪ್ರತಿಪಾದಿಸಿದ ಮೋದಿ ಕಳೆದ ೫ ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಹೆದ್ದಾರಿ, ರಾಜ್ಯ ಹೆದ್ದಾರಿ, ಮೆಟ್ರೋ ರೈಲು ವಿಸ್ತರಣೆ ಹೀಗೆ ೧೦ ಹಲವು ಅಭಿವೃದ್ಧಿ ಯೋಜನೆಗಳು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ.
ಬಿಜೆಪಿ ಸರ್ಕಾರದಿಂದ ದೇಶದಲ್ಲಿ ವಿದೇಶ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲೂ ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದೇಶ ಬಂಡವಾಳ ಹರಿದು ಬರಲಿಲ್ಲ ಎಂದು ಟೀಕಿಸಿದರು.

ವಿಜಯಪುರದಲ್ಲೂ ಮೋದಿ ಮತಬೇಟೆ ಶಕ್ತಿ ಪ್ರದರ್ಶನ
ಬೀದರ್‌ನ ಹುಮ್ನಾಬಾದ್‌ನ ಸಮಾವೇಶ ಮುಗಿಸಿಕೊಂಡು ಪ್ರಧಾನಿ ಮೋದಿ ಅವರು ವಿಜಯಪುರಕ್ಕೆ ತೆರಳಿ, ವಿಜಯಪುರದಲ್ಲೂ ಮತಬೇಟೆಯ ಸಮಾವೇಶದಲ್ಲಿ ಭಾಗಿಯಾದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಬ್ ಕ ಸಾಥ್, ಸಬ್ ಕಾ ವಿಕಾಸ್‌ಗೆ ಭಗವಾನ್ ಬಸವಣ್ಣನವರು ಸ್ಫೂರ್ತಿ ಅವರ ಕಾಯಕ ದಾಸೋಹದ ಪ್ರೇರಣೆ ಯೋಜನೆಗಳ ಹಿಂದಿದೆ. ಭಗವಾನ್ ಬಸವಣ್ಣನವರ ತತ್ವಗಳನ್ನು ಬಿಜೆಪಿ ಸರ್ಕಾರ ಅನುಷ್ಠಾನ ಮಾಡುತ್ತಿದೆ. ಕಾಂಗ್ರೆಸ್ ಬಸವಣ್ಣನವರ ತತ್ವಗಳನ್ನು ಅನುಷ್ಠಾನ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಿಜಪುರದ ಸಮಾವೇಶದಲ್ಲೂ ಮೋದಿ ಅವರು ವಾಗ್ದಾಳಿ ನಡೆಸಿದರು.