ಬೈಡೆನ್ ಹೇಳಿಕೆ ಟ್ರೋಲ್

ವಾಷಿಂಗ್ಟನ್, ಜು.೨೭- ಕೆಲವೊಂದು ಬಾರಿ ಆಯತಪ್ಪಿ ಬೀಳುವ ಮೂಲಕ ಅಥವಾ ವಿಭಿನ್ನ ರೀತಿಯ ದೇಹಭಾಷೆಗಳ ಮೂಲಕ ನಗೆಪಾಟಲಿಗೀಡಾಗುತ್ತಿದ್ದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಇದೀಗ ಮತ್ತೊಮ್ಮೆ ಮುಜುಗರಕ್ಕೆ ಸಿಲುಕಿದ್ದಾರೆ. ಕ್ಯಾನ್ಸರ್ ರೋಗವನ್ನು ನಮ್ಮ ಸರ್ಕಾರ ಪರಿಣಾಮಕಾರಿಯಾಗಿ ಅಂತ್ಯಗೊಳಿಸಿದೆ ಎಂದು ಹೇಳುವ ಮೂಲಕ ಬೈಡೆನ್ ಇದೀಗ ಮತ್ತೊಮ್ಮೆ ಹಾಸ್ಯಕ್ಕೆ ಗುರಿಯಾಗಿದ್ದಾರೆ.
ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬೈಡೆನ್, ಮಾನಸಿಕ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ತಮ್ಮ ಸರಕಾರ ಬದ್ಧವಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ನಮ್ಮ ಸರಕಾರ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದೆ’ ಎಂದು ಘೋಷಿಸಿದರು. ಅಮೆರಿಕನ್ನರು ಮಹತ್ಕಾರ್ಯಗಳನ್ನು ಮಾಡಲು ಇತ್ತೀಚೆಗೆ ವಿಶ್ವಾಸವನ್ನು ಯಾಕೆ ಕಳೆದುಕೊಂಡಿದ್ದಾರೆ ಎಂಬ ಪ್ರಶ್ನೆಯನ್ನು ನಾನು ಯಾವಾಗಲೂ ಕೇಳುತ್ತಿರುತ್ತೇನೆ. ಒಬ್ಬರು ನನ್ನನ್ನು ಕೇಳಿದರು ‘ನೀವು ಏನನ್ನಾದರೂ ಮಾಡಲು ಸಾಧ್ಯವಾಗುವುದಾದರೆ ಏನು ಮಾಡಲು ಬಯಸುತ್ತೀರಿ’ ಎಂದು. ಅದಕ್ಕೆ ನಾನು ಉತ್ತರಿಸಿದೆ- ನಾನು ಕ್ಯಾನ್ಸರ್ ಅನ್ನು ಗುಣಪಡಿಸುತ್ತೇನೆ ಎಂದು. ನಿಮಗೆಲ್ಲಾ ತಿಳಿದಿರುವಂತೆ ನಾವು ಈಗಾಗಲೇ ಕ್ಯಾನ್ಸರ್ ಅನ್ನು ಕೊನೆಗೊಳಿಸಿದ್ದೇವೆ’ ಎಂದರು. ಸದ್ಯ ಬೈಡೆನ್ ನೀಡಿರುವ ಈ ವಿಲಕ್ಷಣ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ರೀತಿಯಲ್ಲಿ ಹಾಸ್ಯಕ್ಕೆ ಗುರಿಯಾಗಿದೆ. ಈ ಬಗ್ಗೆ ಕಮೆಂಟ್ ಮಾಡಿರುವ ಬಳಕೆದಾರರೊಬ್ಬರು, ? ಮೆದುಳು ನಿಷ್ಕ್ರಿಯಗೊಂಡಿರುವ ಅಧ್ಯಕ್ಷರು ಕ್ಯಾನ್ಸರ್ ಕೊನೆಗೊಳಿಸಿರುವ ವಿಷಯ ಈಗಷ್ಟೇ ತಿಳಿದುಬಂದಿದೆ? ಎಂದು ಲೇವಡಿ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಕ್ಕೇರಿದಂದಿನಿಂದ ಒಂದಿಲ್ಲೊಂದು ವಿಲಕ್ಷಣ ನಡವಳಿಕೆಗಳ ಮೂಲಕ ಗುರುತಿಸಿಕೊಂಡಿದ್ದ ಬೈಡೆನ್ ಸದ್ಯ, ವಿಭಿನ್ನ ರೀತಿಯ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಹಾಸ್ಯಕ್ಕೆ ಗುರಿಯಾಗಿದ್ದಾರೆ.